ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ವಿವಿಧ ಗಣ್ಯ ವ್ಯಕ್ತಿಗಳು, ಹಿಂದಿನ ಶಿಕ್ಷಣ ಸಚಿವರು, ಮಾಧ್ಯಮದ ಮಿತ್ರರು, ಸಚಿವ ಸಂಪುಟದ ಸಹೋದ್ಯೋಗಿಗಳು, ಮಾನ್ಯ ಮುಖ್ಯಮಂತ್ರಿಗಳೂ ಸೇರಿದಂತೆ ಹಲವರೊಂದಿಗೆ ಈ ಕುರಿತು ಸಮಾಲೋಚನೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು, ಅದೇ ಸಂದರ್ಭದಲ್ಲಿ ಅವರ ಆರೋಗ್ಯಕ್ಕೂ ಸಮಸ್ಯೆಯಾಗಬಾರದೆನ್ನುವ ಮಧ್ಯಮ ಪಥವೊಂದನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಪರೀಕ್ಷೆ ನಡೆಸುವುದು ನಮ್ಮ ಪ್ರತಿಷ್ಠೆಯಾಗಬಾರದು ಆದರೆ ನಮ್ಮ ನಿಲುವು ಮಕ್ಕಳನ್ನು ಇಕ್ಕಟ್ಟಿಗೆ ಸಿಕ್ಕಿಸಬಾರದೆನ್ನುವ ಪ್ರಜ್ಞೆ ನಮ್ಮ ನಿರ್ಧಾರಗಳನ್ನು ನಿಯಂತ್ರಿಸಿದೆ ಎಂದು ಅವರು ಹೇಳಿದರು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯುಸಿ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರು ಈ ಹಿಂದೆ ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅಂಕಗಳನ್ನು ನೀಡಿ ಪ್ರಕಟಗೊಳಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಇಲಾಖೆಯು ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಿದೆ ಹಾಗೂ ಜೂನ್ ಮಾಸಾಂತ್ಯಕ್ಕೆ ಫಲಿತಾಂಶ ಪ್ರಕಟಣೆ ಮಾಡಲಿದೆ ಎಂದರು.