ಬೆಂಗಳೂರು : 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆ ವತಿಯಿಂದ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ನಲ್ಲಿ 214ನೇ ಫ್ಲವರ್ ಶೋ ಆಯೋಜಿಸಲಾಗಿದೆ. ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಫ್ಲವರ್ ಶೋ ಉದ್ಘಾಟನೆ ಮಾಡಲಿದ್ದಾರೆ. ಇಂದಿನಿಂದ ಆಗಸ್ಟ್ 15ರವರೆಗೂ ಫ್ಲವರ್ ಶೋ ನಡೆಯಲಿದೆ.
ಸ್ವಾತಂತ್ರ್ಯ ದಿನದ ಅಂಗವಾಗಿ ಇಂದಿನಿಂದ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಬಾರಿಯ ಫ್ಲವರ್ ಶೋನಲ್ಲಿ ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ನಲ್ಲಿ ನಡೆಯುತ್ತಿದ್ದು, ರಾಜ್ಯದ ಹಿರಿಮೆ ಹಿಗ್ಗಿಸಿದ ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಅವರ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿ ಫಲಕಗಳ ಮೂಲಕ ಜನರಿಗೆ ಇಲ್ಲಿ ತಿಳಿಸಲಾಗುತ್ತಿದೆ. ಜೊತೆಗೆ ಲಾಲ್ ಬಾಗ್ನ ಗಾಜಿನ ಮನೆಯಲ್ಲಿ ಹೂವಿನಲ್ಲಿ ವಿಧಾನಸೌಧ ತಲೆ ಎತ್ತಿ ನಿಂತಿದೆ.
ಇನ್ನು ಈ ಬಾರಿಯ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಲಿದೆ. ಒಟ್ಟು 3.5 ಲಕ್ಷ ಬಗೆಬಗೆಯ ಹೂವುಗಳಿಂದ ಈ ವಿಧಾನಸೌಧ ನಿರ್ಮಿಸಲಾಗಿದೆ. ಇದರ ಜೊತೆಗೆ ಕೆಂಗಲ್ ಹನುಮಂತಯ್ಯವನವರ ಹೂವಿನ ಪ್ರತಿಮೆಯೂ ಇಲ್ಲಿ ಇರಲಿದೆ. ಆದರೆ ಈ ಬಾರಿ ಸ್ಕಾಟ್ಲೆಂಟ್, ಇಂಡೋನೇಷಿಯಾದ ಹೂವುಗಳಿಗೆ ಗೇಟ್ ಪಾಸ್ ನೀಡಲಾಗಿದ್ದು, ಕೊಲ್ಕತ್ತಾ, ಪುಣೆ, ಆಂಧ್ರ, ಊಟಿ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಹೂವುಗಳನ್ನು ತರಿಸಲಾಗಿದೆ. ಒಟ್ಟಾರೆ ಈ ಬಾರಿ 25 ಲಕ್ಷ ಹೂವುಗಳು ಫಲಪುಷ್ಪ ಪ್ರದರ್ಶನದಲ್ಲಿ ಮೈಬಳುಕಿಸಿ ಜನರ ಮನಸೆಳೆಯಲು ಸಿದ್ದವಾಗಿನಿಂತಿದೆ.
ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು :
ಡಾ.ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ
ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ
ಡಾ.ಮರಿಗೌಡ ರಸ್ತೆ- ಹಾಪ್ ಕಾಮ್ಸ್ ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ
ಜೆ.ಸಿ. ರಸ್ತೆ ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ
ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು :
ಡಾ. ಮರಿಗೌಡ ರಸ್ತೆ,ಲಾಲ್ ಬಾಗ್ ಮುಖ್ಯ ದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
ಲಾಲ್ ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ ಬಾಗ್ ಮುಖ್ಯದ್ವಾರದ ವರೆಗೆ
ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ ವರೆಗೆ
ಬಿ.ಎಂ.ಟಿ.ಸಿ ರಸ್ತೆಯಲ್ಲಿ, ರಸ್ತೆಯ ಎರಡೂ ಬದಿಗಳಲ್ಲಿ
ಲಾಲ್ ಬಾಗ್ ವೆಸ್ಟಿಗೇಟ್‌ನಿಂದ ಆರ್.ವಿ. ಟೀಚರ್ ಕಾಲೇಜ್‌ವರೆಗೆ
ಆರ್ ವಿ ಟೀಚರ್ ಕಾಲೇಜ್‌ನಿಂದ ಆಶೋಕ ಪಿಲ್ಲರ್ ವರೆಗೆ
ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ
ಡಾ.ಮರೀಗೌಡ ರಸ್ತೆ, ಲಾಲ್ ಬಾಗ್ ರಸ್ತೆ, ಕೆ.ಹೆಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸಾಧ್ಯತೆ ಹಿನ್ನೆಲೆ ಸಾರ್ವಜನಿಕರು ಸಾಧ್ಯವಾದಷ್ಟು ಸಮೂಹ ಸಾರಿಗೆ ವ್ಯವಸ್ಥೆ ಬಳಸಲು ಮನವಿ ಮಾಡಲಾಗಿದೆ. ಬಿಎಂಟಿಸಿ ಬಸ್, ಮೆಟ್ರೋ, ಕ್ಯಾಬ್‌ಗಳನ್ನು ಬಳಸಲು ಸೂಚಿಸಲಾಗಿದೆ.