ಶಿವಮೊಗ್ಗ : ನಗರದ ತುಂಗಾ ಸೇತುವೆ ಮೇಲಿಂದ ನದಿಗೆ ಹಾರಿದ ಯುವಕನೊಬ್ಬ ಹುಚ್ಚಾಟ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭೀತಿ ಹುಟ್ಟಿಸಿದಂತಾಗಿದೆ.
ಮದ್ಯ ಸೇವಿಸಿದ ನಶೆಯಲ್ಲಿ ಯುವಕನೊಬ್ಬ ತುಂಗಾ ನದಿಯ ದಡದಲ್ಲಿ ನಿಂತೂ ಏಕಾಏಕಿ ರಭಸವಾಗಿ ಹರಿಯುವ ನೀರಿಗೆ ಹಾರಿದ್ದಾನೆ ಈಜಾಡುವುದಕ್ಕೂ ಆಗದೇ ಹರಸಾಹಸ ಪಟ್ಟ ಘಟನೆ ಬೆಳಕಿಗೆ ಬಂದಿದೆ. ನದಿಗೆ ಹಾರಿದ್ದನ್ನ ಕಂಡು ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದಲ್ಲದೇ, ಕೋಟೆ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಆತ್ಮಹತ್ಯೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ, ಪೊಲೀಸರು ಆಗಮಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದ್ದು, ಯುವಕನನ್ನು ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ. ಆಗ ಯುವಕ ನನಗೆ ಈಜು ಬರುತ್ತಿದ್ದರಿಂದ ಮೋಜಿಗಾಗಿ ಹಾರಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ತನ್ನ ಹೆಸರು ಗಂಗಪ್ಪ ಯಾನೆ ಗಂಗೂರಿ ಎಂದಿದ್ದಾನೆ. ತುಂಬಿದ ತುಂಗೆಯಲ್ಲಿ ಯುವಕನ ಕಪಿ ಚೇಷ್ಠೆಗೆ ಸಾರ್ವಜನಿಕರು ತರಾಟೆಗೈದಿದ್ದಾರೆ. ಭಾರಿ ಮಳೆ ಹಿನ್ನೆಲೆ ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಪ್ರಸ್ತುತ 60 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹೊಳೆಗೆ ಬಿಡಲಾಗುತ್ತಿದೆ. ತುಂಬಿ ಹರಿಯುತ್ತಿರುವ ತುಂಗೆಯಲ್ಲಿ ಈ ರೀತಿ ಹುಚ್ಚಾಟ ಮೆರೆಯದಂತೆ ಎಚ್ಚರಿಕೆ ನೀಡಲಾಗಿದೆ.