ಬೆಂಗಳೂರು : ನಿಮಗೆ ಏನಾದ್ರೂ ಸಮಸ್ಯೆ ಇದ್ಯಾ. ಹಾಗಾದ್ರೆ ಬನ್ನಿ ಬರೀ ಹದಿನೈದೇ ದಿನದಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ , ಆಗಿಲ್ಲ ಅಂದ್ರೆ ನಿಮ್ಮ ಹಣ ವಾಪಸ್ಸು ಕೊಡುತ್ತೇನೆ ಎಂದು ನಂಬಿಸಿದ ಖತರ್ನಾಕ್ ಜ್ಯೋತಿಷಿಯೊಬ್ಬ ಕಷ್ಟ ಹೇಳಿಕೊಂಡು ಬಂದ ಮನೆಗೆ ಕನ್ನ ಹಾಕಿ ನಿಂಬೆಹಣ್ಣು ಇಟ್ಟು ಪಂಗನಾಮ ಹಾಕಿ ಎಸ್ಕೇಪ್ ಆದ ಘಟನೆಯೊಂದು ಬೆಳಕಿಗೆ ಬಂದಿದೆ
ಅಮವಾಸ್ಯೆ ದಿನದಂದು ಮನೆಯವರನ್ನು ದೇವಸ್ಥಾನಕ್ಕೆ ಕಳುಹಿಸಿದ ನಂತರ ಅದೇ ದಿನ ಮನೆಗೆ ತೆರಳಿ ನಗನಾಣ್ಯ ದೋಚಿ ನಿಂಬೆಹಣ್ಣು ಇಟ್ಟು ಮಾಟ ಮಾಡಿಸಿದ್ದಾರೆ ಎಂದೇಳಿ ಯಾಮಾರಿಸುತ್ತಿದ್ದ ಜ್ಯೋತಿಷಿ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಪೇಟೆಯ ಸುರೇಶ್ ಪಾಟೀಲ್ ವಿರುದ್ದ ಮನೆಯೊಡತಿ ಇಂದಿರಾ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗಂಡ-ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ಇಂದಿರಾ ವಾಸವಾಗಿದ್ದು ಜೀವನಕ್ಕಾಗಿ ಮನೆಕೆಲಸ ಮಾಡುತ್ತಿದ್ದರು. ಮಗಳನ್ನ ಕುಣಿಗಲ್ ನ ಹೆಬ್ಬೂರು ನಿವಾಸಿ ಗೋವಿಂದಗೌಡ ಎಂಬುವರೊಂದಿಗೆ ಮದುವೆ ಮಾಡಿಸಿ ಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಗೆ ಬರುತ್ತಿದ್ದ ಮಗಳನ್ನ ಕಂಡು ಇಂದಿರಾ ಚಿಂತಾಕ್ರಾಂತಗಿದ್ದಳು. ಈ ಬಗ್ಗೆ ತನ್ನ ತಾಯಿಯೊಂದಿಗೆ ಮನದ ದುಃಖವನ್ನ ಇಂದಿರಾ ವ್ಯಕ್ತಪಡಿಸಿದ್ದಳು. ಸಮಸ್ಯೆಗೆ ಪರಿಹಾರವೆಂಬತೆ ಆಕೆಯ ತಾಯಿಯು ತನಗೆ ಜ್ಯೋತಿಷಿ ಸುರೇಶ್ ಪಾಟೀಲ್ ಪರಿಚಯವಿದ್ದು ಅವರಿಗೆ ಶಾಸ್ತ್ರ ತೋರಿಸು ಎಲ್ಲವೂ ಸರಿಹೋಗಲಿದೆ ಎಂದು ಹೇಳಿ ಕಳೆದ ಡಿಸೆಂಬರ್ ನಲ್ಲಿ ಇಂದಿರಾ ನಿವಾಸಕ್ಕೆ ಕಳುಹಿಸಿದ್ದಳು.
ಮನೆ ದೋಚಿ ನಿಂಬೆಹಣ್ಣು ಇಡ್ತಿದ್ದ ಜ್ಯೋತಿಷಿ
ಕಳೆದ ಡಿಸೆಂಬರ್ ನಲ್ಲಿ ಮನೆಗೆ ಬಂದ ಜ್ಯೋತಿಷಿ ಎಲ್ಲವೂ ಗಮನಿಸಿದ್ದಾನೆ. ನಿಮ್ಮ ಮಗಳ ಜೀವನ ಸರಿಪಡಿಸುತ್ತೇನೆ. ಅಮಾವಾಸ್ಯೆ ದಿನದಂದು ಮನೆಯಲ್ಲಿ ಯಾರು ಇರಬಾರದು. ಎಲ್ಲರೂ ದೇವಸ್ಥಾನಕ್ಕೆ ಹೋಗುವಂತೆ ಸೂಚಿಸಿದ್ದ. ಇದರಂತೆ ಇಂದಿರಾ ಕುಟುಂಬ ದೇವಸ್ಥಾನಕ್ಕೆ ಹೋಗಿತ್ತು. ಇದೇ ಸರಿಯಾದ ಸಮಯ ಅಂದುಕೊಂಡ ಆರೋಪಿ ಮನೆಗೆ ಬಂದು ಬೀರುವಿನಲ್ಲಿದ್ದ 5 ಲಕ್ಷ ಬೆಲೆಯ ಚಿನ್ನಾಭರಣ ದೋಚಿದ್ದಾನೆ. ಬಳಿಕ ಬಿರುವಿನಲ್ಲಿ ನಿಂಬೆ ಹಣ್ಣು ಇಟ್ಟಿದ್ದ. ಇದೇ ರೀತಿ ಅಮಾವಾಸ್ಯೆ ದಿನಗಳಂದೆ ಕಳ್ಳತನ ಮಾಡುತ್ತಿದ್ದ. ಕೆಲ ದಿನಗಳ ಬಳಿಕ ಕುಟುಂಬಸ್ಥರನ್ನ ಭೇಟಿಯಾಗಿ ಮನೆಗೆ ಬಂದು ಬೀರುವನ್ನ ತೆರೆಯಿಸಿ ತಾನೇ ಇಟ್ಟಿದ್ದ ನಿಂಬೆಹಣ್ಣ ತೋರಿಸಿದ್ದಾನೆ.
ನಿಮ್ಮ ಬೀಗರು ಮಾಟ- ಮಂತ್ರ ಮಾಡಿಸಿ ಚಿನ್ನದೊಡವೆ ದೋಚಿದ್ದಾರೆ. 65 ದಿನ ಕಾಲಾವಕಾಶ ಕೊಟ್ಟರೆ ದೋಚಿರುವ ಒಡವೆಗಳನ್ಮ ಮರಳಿ ಕೊಡಿಸುವುದಾಗಿ ನಂಬಿಸಿ ಎಸ್ಕೇಪ್ ಆಗಿದ್ದಾನೆ. ಎರಡು ತಿಂಗಳ ಬಳಿಕ ಪೋನ್ ಮಾಡಿದಾಗ ಸ್ಚಿಚ್ ಆಫ್ ಮಾಡಿಕೊಂಡಿದ್ದು ಈತನ ಮೇಲೆ ಅನುಮಾನಗೊಂಡು ಯಲಹಂಕ ಪೊಲೀಸರಿಗೆ ಜ್ಯೋತಿಷಿ ವಿರುದ್ಧ ದೂರು ದಾಖಲಿಸಿದ್ದಾರೆ.ನೀವು ಯಾವುದಕ್ಕೂ ಹುಷರಾಗಿರಿ ಇಲ್ಲ ಅಂದ್ರೆ ನಿಮಗೂ ಇಂತಹ ಅಸಾಮಿಗಳು ನಿಮಗೂ ಪಂಗನಾಮ ಹಾಕಬಹುದು ಹುಷಾರ್.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್.