ಶಿವಮೊಗ್ಗ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಬಗ್ಗೆ ಅವಹೇಳನ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ತಾಲೂಕು ಕಚೇರಿ ಎದುರು ಮಂಗಳವಾರ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗುವುದು ನಮ್ಮ ದುರದೃಷ್ಟ. ಬೀದರ್ ಮೂಲದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮರಗಿಡ ಎಂದರೆ ಏನು? ನೆರಳು ಎಂದರೆ ಏನು? ಎಂಬುದೇ ಗೊತ್ತಿಲ್ಲ. ಮಲೆನಾಡಿನವರ ಬದುಕು, ಪಶ್ಚಿಮ ಘಟ್ಟದವರ ಸಮಸ್ಯೆ ಬಗ್ಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.
ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ. ಇನ್ನು ಖಂಡ್ರೆ ಅವರ ತಲೆಕೂದಲು ಮುಚ್ಚಿಕೊಂಡಿದ್ದರಿಂದ ಉಳಿದುಕೊಂಡಿದ್ದಾರೆ. ಅದೇ ಅವರ ನೆರಳು ಎಂದು ಜ್ಞಾನೇಂದ್ರ ನಾಲಿಗೆ ಹರಿಬಿಟ್ಟಿದ್ದಾರೆ.