ಬೆಂಗಳೂರು : ನಿನ್ನೆ ರಾತ್ರಿ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇವಲ ಬೈಕ್ ಕೀಗಾಗಿ ಶುರುವಾದ ಜಗಳ ತೀವ್ರಗೊಂಡು ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಳಕಿಗೆ ಬಂದಿದೆ.
ನೇಪಾಳ ಮೂಲದ ತಿಲಕ್ ಚಂದ್ರನನ್ನ ಹತ್ಯೆ ಮಾಡಿ ಸಿದ್ದರಾಜು ಎಂಬಾತ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಿಲಕ್ ಚಂದ್ರ ಕಳೆದ ಏಳು ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅನಾಥನಾಗಿದ್ದ ಈತ ಪೋನ್ ಬಳಸುತ್ತಿರಲಿಲ್ಲ.. ಆರೋಪಿ ಸಿದ್ದರಾಜು ಮಂಡ್ಯ ಮೂಲದವನಾಗಿದ್ದು ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇಬ್ಬರು ಸ್ನೇಹಿತರು ಸೇರಿ ಒಟ್ಟು ಆರು ಜನ ಒಂದೇ ರೂಮಿನಲ್ಲಿ ವಾಸ್ತವ್ಯ ಹೂಡಿದ್ದರು.
ಕೆಲಸಗಾರರಿಗೆ ಅನುಕೂಲವಾಗಲೆಂದು ಮಾಲೀಕರು ಬೈಕ್ ನೀಡಿದ್ದರು. ಒಂದೇ ಬೈಕಿನಲ್ಲಿ ಇಬ್ಬರು ಪ್ರತಿನಿತ್ಯ ಕೆಲಸ ಬರುತ್ತಿದ್ದರು. ನಿನ್ನೆ ಎಂದಿನಂತೆ ಕೆಲಸಕ್ಕೆ ಹೋಗಿ ಬಂದಿದ್ದರು. ಸಂಜೆ ಹೊಸಕೆರೆಹಳ್ಳಿಯ ಬಾರ್ ಗೆ ಹೋಗಿ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಈ ವೇಳೆ ಬೈಕ್ ಕೀ ಕೊಡುವಂತೆ ಸಿದ್ದರಾಜು ಕೇಳಿದ್ದಾನೆ.. ಆದರೆ ತಿಲಕ್ ಕೀ ಕೊಡಲು ನಿರಾಕರಿಸಿದ್ದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕೋಪದಲ್ಲಿ ಮನೆಯಲ್ಲಿದ್ದ ಚಾಕುವಿನಿಂದ ತಿಲಕ್ ಗೆ ಚುಚ್ಚಿ ಹತ್ಯೆ ಮಾಡಿ ಪೊಲೀಸರ ಮುಂದೆ ಆರೋಪಿ ಶರಣಾಗತಿಯಾಗಿದ್ದಾನೆ. ಹತ್ಯೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೈಕ್ ವಿಚಾರಕ್ಕೆ ಕೊಲೆ ಆಗಿದ್ಯಾ ಅಥವಾ ಇಬ್ಬರ ನಡುವೆ ಬೇರೆ ಏನಾದರೂ ವೈಷಮ್ಯ ಇತ್ತ ಅನ್ನೋದು ತಿಳಿದು ಬರಬೇಕಿದೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್