ಬೆಂಗಳೂರು : ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣ ಸಾವು ಪ್ರಕರಣ ಸಂಬಂಧಿಸಿ ಇಂದು ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ರಹಸ್ಯ ಬಹಿರಂಗವಾಗಿದೆ.
ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು, ಈ ವೇಳೆ ನಾಲ್ವರ ಸಾವಿನ ರಹಸ್ಯ ಬಹಿರಂಗವಾಗಿದ್ದು, ಪತ್ನಿ ಹೇಮಾವತಿ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿರೋ ಶಂಕಿಸಲಾಗುತ್ತಿದೆ. ಪತ್ನಿ ಹೇಮಾವತಿ ಕತ್ತಿನ ಭಾಗದಲ್ಲಿ ಕೈ ಗುರುತುಗಳು ಬಿದ್ದಿದ್ದು, ದೇಹದ ಬಣ್ಣ ಬದಲಾಗಿದೆ. ಒಂದನೇ ತಾರೀಕಿನಂದು ಹೆಂಡತಿಗೆ ಬಲವಂತವಾಗಿ ವಿಷ ಕೊಟ್ಟು ಕತ್ತು ಹಿಸುಕಿ ಕೊಲೆ ಮಾಡಿರೋ ಬಗ್ಗೆ ಮಾಹಿತಿ ತಿಳಿದು ಬಂದಿದೆ. ತಂದೆಯೇ ಮಕ್ಕಳ ಕತ್ತನ್ನ ವೇಲಿನಿಂದ ಬಿಗಿದು ಇಬ್ಬರನ್ನು ಕೊಂದು, ಕೊನೆಗೆ ತಾನೂ ನೇಣುಬಿಗಿದುಕೊಂಡು ಸಾವಪ್ಪಿದ ದುರಂತ ಘಟನೆ ಬೆಳಕಿಗೆ ಬಂದಿದೆ. ಕೊಲೆ ಮಾಡುವ ಮುನ್ನವೇ ಮೊಬೈಲ್‌ಗಳನ್ನ ಪತಿ ವೀರಾರ್ಜುನ ಸ್ವಿಚ್ ಅಫ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ
ಸಿಲಿಕಾನ್ ಸಿಟಿಯಲ್ಲಿ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಬಳಿಕ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿತ್ತು. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಆಂಧ್ರ ಮೂಲದ ವಿರಾರ್ಜುನ (31 ) ಪತ್ನಿ ಹೇಮಾವತಿ (29) ಮಕ್ಕಳಾದ ಒಂದೂವರೆ ವರ್ಷದ ಮೋಕ್ಷ ಹಾಗೂ 8 ತಿಂಗಳ ಮಗುವಾದ ಸೃಷ್ಟಿ ಸುನಾನ್ಯ ಸಾವನ್ನಪ್ಪಿದವರು. ಮೇ 31ರಂದು ಘಟನೆ ನಡೆದಿದೆ. ಸಾವಿನ ಮನೆಯಿಂದ ದುವಾರ್ಸನೆ ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದು ಬಾಗಿಲು ಹೊಡೆದು ಒಳಗೆ ಹೋಗಿ ಪರಿಶೀಲಿಸಿದಾಗ ನಾಲ್ವರು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮಾಹಿತಿ ಪಡೆದ ಎಫ್ ಎಸ್ ಎಲ್ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸುತ್ತಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಮೂಲದ ವಿರಾರ್ಜುನಾ ಕಳೆದ ಆರು ವರ್ಷಗಳ ಹಿಂದೆ ಹೇಮಾವತಿಯೊಂದಿಗೆ ಮದುವೆ ಮಾಡಿಕೊಂಡಿದ್ದರು. ಕಾಡುಗೋಡಿಯ ಸಿಗೇಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಸಾಫ್ಟ್ ವೇರ್ ಇಂಜಿನಿಯರ್ ಅಗಿ ವಿರಾರ್ಜುನಾ ಕೆಲಸ ಮಾಡುತ್ತಿದ್ದರು. ಒಂದೇ ಕುಟುಂಬದ ನಾಲ್ವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.. ಪತ್ನಿ-ಮಕ್ಕಳನ್ನ ಹತ್ಯೆಗೈದು ಬಳಿಕ ವಿರಾರ್ಜುನಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.