ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬ್ರ‍್ಯಾಂಡ್ ಬೆಂಗಳೂರು ಮಾಡಲು ಪ್ರತ್ಯೇಕ ಸಮಿತಿ ಜೊತೆ ಬಿಬಿಎಂಪಿ ಸಭೆ ನಡೆಸಿತು. ‘ಬ್ರ‍್ಯಾಂಡ್ ಬೆಂಗಳೂರು’ ಯೋಜನೆಯಡಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್, 10 ದಿನಗಳ ಬೆಂಗಳೂರು ಹಬ್ಬ, 7 ದಿನಗಳ ಸಾಂಸ್ಕೃತಿಕ ಉತ್ಸವ, ಹೂ ಹಬ್ಬ, ಜೆಸಿ ರಸ್ತೆಯಲ್ಲಿರುವ ಪಾಲಿಕೆ ಸ್ಥಳದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ಸಭಾಂಗಣ ಹಾಗೂ ಆರ್ಟ್ ಗ್ಯಾಲರಿ ನಿರ್ಮಾಣ, ಕೆರೆಗಳ ಹಬ್ಬ, ಥಿಯೇಟರ್ ಹಬ್, ಮಕ್ಕಳಿಗಾಗಿಯೇ ಸಾಂಸ್ಕೃತಿಕ ಹಬ್ ಇವುಗಳ ಕುರಿತು ಸಮಿತಿ ಶಿಫಾರಸು ನೀಡಿತು.
ಈ ಪ್ರಮುಖ ಶಿಫಾರಸುಗಳನ್ನು ಪರಿಗಣಿಸಿ ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು’ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಹಾಗೂ ಜಯರಾಂ ರಾಯಪುರ ತಿಳಿಸಿದರು.
‘ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 20 ಯೋಜನೆಗಳನ್ನು ನಿಗದಿತ ಸಮಯದೊಳಗಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಶಿಫಾರಸುಗಳನ್ನು ಕಡಿಮೆ, ಮಧ್ಯಮ ಹಾಗೂ ದೀರ್ಘಕಾಲದ ಯೋಜನೆಗಳನ್ನಾಗಿ ವಿಂಗಡಿಸಿ, ಕಾಲಮಿತಿ ನಿಗದಿಪಡಿಸಲಾಗುತ್ತದೆ. ಆ.8ರಂದು ನಡೆಯುವ ಸಭೆಯಲ್ಲಿ ಶಿಫಾರಸುಗಳನ್ನು ಅಂತಿಮಗೊಳಿಸಿ ಸರ್ಕಾರದ ಮುಂದಿರಿಸಲಾಗುತ್ತದೆ. ಅನುಮೋದನೆ ದೊರೆತ ಮೇಲೆ ಅನುಷ್ಠಾನ ಕಾರ್ಯ ಆರಂಭಿಸಲಾಗುತ್ತದೆ’ ಎಂದು ಹೇಳಿದರು.