Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಬಗ್ಗೆ ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ದ ದಂಗೆ ಎದ್ದವರಿಗೆ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ರಾಜ್ಯದ ಜನತೆಗೆ ಮಾಡುವ ದ್ರೋಹವಾಗಿದೆ. ಅಲ್ಲದೇ ದಲಿತ ಶಾಸಕನ ಮನೆ ಸುಟ್ಟವರ ರಕ್ಷಣೆ ಮಾಡುವುದು ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ತನ್ವೀರ್ ಸೇಠ್ ಗೃಹ ಸಚಿವರಿಗೆ ಪತ್ರ ಬರೆದು ಆರೋಪಿಗಳ ವಿರುದ್ದದ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ‌. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣ ಬಹಳ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಠಾಣೆ, ಪೊಲಿಸ್ ವಾಹನಗಳು ಕಾಂಗ್ರೆಸ್ ಶಾಸಕನ ಮನೆ ಸುಟ್ಟಿದ್ದಾರೆ.

ರಾಜ್ಯದ ಮೇಲೆ ದಂಗೆ ಎದ್ದರೂ ಕೂಡ ಅವರ ವಿರುದ್ದದ ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನ ಮಾಡಿದ್ದಾರೆ ಎಂದರೆ ರಾಜ್ಯದ ವಿರುದ್ಧ ಏನೇ ಮಾಡಿದರೂ ರಕ್ಷಣೆ ದೊರೆಯುತ್ತದೆ ಎಂಬ ಧೈರ್ಯ ಅಪರಾಧಿಗಳಿಗೆ ಬರುತ್ತದೆ. ದಂಗೆ ಎದ್ದವರಿಗೂ ಕೂಡ ಆಶ್ರಯ ಕೊಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.‌


ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ಪ್ರಕರಣವನ್ನು ಎನ್‌ಐಎ ತೆಗೆದುಕೊಂಡಿದೆ. ಇದರಲ್ಲಿ ಪಿಎಫ್ಐ‌ (PFI), ಎಸ್ ಡಿಪಿಐ (SDPI) ಕೈವಾಡ ಇದೆ ಅಂತ ಬಹಳ ಸ್ಪಷ್ಟವಾದ ಪುರಾವೆಗಳಿವೆ. ತನಿಖೆ ನಡಿಸಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ಎನ್‌ಐಎ (NIA) ತನಿಖೆ ನಡೆಸುತ್ತಿರುವ ಪ್ರಕರಣವನ್ನು ಇವರು ಹೇಗೆ ವಾಪಸ್ ಪಡೆಯುತ್ತಾರೆ. ನಾವು ಅಧಿಕಾರದಲ್ಲಿ ಇದ್ದಾಗಲೂ ಈ ಪ್ರಕರಣಗಳನ್ನು ವಾಪಸ್ ಪಡೆಯುವಂತೆ‌ ಒತ್ತಡ ಇತ್ತು. ನಾವು ಸಾಕ್ಷಿ ಸಮೇತ ಹಿಡಿದುಕೊಂಡು ಅವರನ್ನು ಆರೆಸ್ಟ್ ಮಾಡಿದ್ದೇವು ಎಂದರು.

ನಾವು ಆವತ್ತು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದರಿಂದ ಪ್ರಕರಣ ನಿಯಂತ್ರಣಕ್ಕೆ ಬಂದಿತ್ತು. ಮುಖ್ಯಮಂತ್ರಿಗಳಿಗೂ ಕೆಲವು ಸಂಘಟನೆಗಳು ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟ ನಿಲುವಿನೊಂದಿಗೆ ಬರಬೇಕು. ಇಂತ ದೇಶದ್ರೋಹಿ ಪ್ರಕರಣದಲ್ಲಿರುವ ವ್ಯಕ್ತಿಗಳಿಗೆ ಶಿಕ್ಷೆ ಕೊಡುತ್ತೀರಾ ಅಥವಾ ಪ್ರಕರಣ ವಾಪಸ್ ತೆಗೆದುಕೊಳ್ಳುತ್ತೀರಾ ಎನ್ನುವುದು ಸ್ಪಷ್ಟವಾಗಿರಬೇಕು ಎಂದು ಆಗ್ರಹಿಸುತ್ತೇನೆ. ಈ ಶಕ್ತಿಗಳು ಈ ಸರ್ಕಾರ ಅಧಿಕಾರಕ್ಕೆ ಬರಲು ಬಹಳ ದೊಡ್ಡ ಮಟ್ಟದ ಸಹಾಯ ಮಾಡಿವೆ. ಹೀಗಾಗಿ ಈಗ ಅವರ ಮುಲಾಜಿನಲ್ಲಿ ಸರ್ಕಾರ ನಡೆಸುವಂತಾಗಿದೆ ಎಂದು ಆರೋಪಿಸಿದರು.


ಕಾಂಗ್ರೆಸ್ ದಲಿತ ಶಾಸಕನ ಮನೆ ಮೇಲೆ ದಾಳಿ ಮಾಡಿದವರನ್ನು ರಕ್ಷಣೆ ಮಾಡಲು ಮುಂದಾಗಿರುವುದು ಕಾಂಗ್ರೆಸ್‌ನ ಮತ್ರೊಂದು ದಲಿತ ವಿರೋಧಿ ನಿತಿಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು. ಈ ಪ್ರಕರಣದಲ್ಲಿ ಮಾಜಿ ಮೇಯರ್ ಮತ್ತು ಕಾರ್ಪೊರೇಟರ್ ರಕ್ಷಣೆಗೆ ಆಗಲೇ ಪ್ರಯತ್ನ ನಡೆಸಿದ್ದರು. ಈಗ ಅವರ ವಿರುದ್ದ ಚಾರ್ಜ್ ಶೀಟ್ ಸಿದ್ದವಾಗಿದೆ. ಹೀಗಾಗಿ ಅವರ ರಕ್ಷಣೆಗೆ ಈ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಪ್ರಕರಣಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಸಿದ್ದಾರೆ. ನಾವು ಇದನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ. ಇದರ ವಿರುದ್ದ ಕಾನೂನಾತ್ಮಕ ಹಾಗೂ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ಉಡುಪಿ ಪ್ರಕರಣ ಪೊಲೀಸರು ಒತ್ತಡಕ್ಕೆ ಮಣಿಯಬಾರದು…


ಉಡುಪಿ ಕಾಲೇಜೊಂದರ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟು ಚಿತ್ರಗಳನ್ನು ತೆಗೆಯುವುದು ಹೇಯ ಕೃತ್ಯ. ಇದರ ಬಗ್ಗೆ ಟ್ವೀಟ್ ಮಾಡಿರುವ ವಿದ್ಯಾರ್ಥಿನಿಯ ವಿರುದ್ದವೇ ತನಿಖೆ ಮಾಡುವ ರೀತಿ ಪೊಲೀಸರು ನಡೆದುಕೊಳ್ಳುತ್ತಿದ್ದು, ಅವರು ಯಾರ ಅಣತಿಯಂತೆ ನಡೆಯುತ್ತಿದ್ದಾರೆ. ಪೊಲಿಸರು ಅಧಿಕಾರಸ್ಥರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಆರೋಪಿಸಿದರು.

ಮೊಬೈಲ್ ವಿಡಿಯೊಗಳನ್ನು ಸೀಜ್ ಮಾಡಬೇಕು. ಅದೇನು ದೊಡ್ಡ ಪ್ರಕರಣ ಅಲ್ಲ ಅಂತ ಗೃಹ ಸಚಿವರು ಹೇಳುತ್ತಿದ್ದಾರೆ. ಕಾಲೇಜಿನಲ್ಲಿಯೇ ಮುಗಿದಿಲ್ಲ. ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ.‌ ಸುಮ್ಮನೇ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಯಿತಾ ? ಸುಮ್ಮನೇ ವಿದ್ಯಾರ್ಥಿಗಳು ತಪ್ಪೊಪ್ಪಿಗೆ ನೀಡಿದ್ದಾರಾ ? ಏನೂ ಇಲ್ಲದೆ ಕಾಲೇಜಿನವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರಾ ? ಅವರ ಮೇಲೆ ಪ್ರಕರಣ ದಾಖಲಿಸಲು ತಪ್ಪೊಪ್ಪಿಗೆ ಒಂದೇ ಸಾಕು ಎಂದು ಹೇಳಿದರು. ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಹೇಳುವುದಾದರೆ, ಪೊಲಿಸರಿಂದ ರಕ್ಷಣೆ ಸಿಗುವುದಿಲ್ಲ ಎನ್ನುವ ಭಾವನೆ ಮೂಡಲಿದೆ. ಹಿರಿಯ ಅಧಿಕಾರಿಗಳು ಕಾನೂನು ಪ್ರಕಾರ ನಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಕೆಳಗಿನ ಅಧಿಕಾರಿಗಳು ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ದರೆ ಅಂತಹ ಅಧಿಕಾರಿಗಳ ವಿರುದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ತಗ್ಗಿ ಬಗ್ಗಿ ನಡೆದರೆ, ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಡಿಮೆಯಾಗಲಿದೆ ಎಂದರು.

ಮುಖ್ಯಮಂತ್ರಿಗಳು ಸ್ಪಷ್ಟ ನಿಲುವು ಪ್ರದರ್ಶಿಸಲಿ..
ಮುಖ್ಯಮಂತ್ರಿಗಳು ಇಂಜಿನಿಯರ್‌ ತಪ್ಪು ಮಾಡಿದ್ದಾರೆ ಎಂದು ಅವರನ್ನು ಅಮಾನತು ಮಾಡಿದ್ದಾರೆ. ಅದೇ ರೀತಿ ಈ ಪ್ರಕರಣದಲ್ಲಿ ದಿಟ್ಟ ನಿಲುವು ತೆಗೆದುಕೊಳ್ಳಲಿ, ಆಗ ಮುಖ್ಯಮಂತ್ರಿಗಳು ನ್ಯಾಯಸಮ್ಮತವಾಗಿದ್ದಾರೆ ಎಂದು ಸಾಬೀತಾಗುತ್ತದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಲೋಪವಾಗಿದ್ದರೂ ಸುಮ್ಮನೆ ಕುಳಿತರೆ ಇದರ ಅರ್ಥ ಏನು ? ರಾಜ್ಯದಲ್ಲಿ ಅರಾಜಕತೆ ಇದೆ. ಈ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ವಿದ್ಯಾರ್ಥಿ ಸತ್ಯ ಹೇಳಿದ್ದಾಳೆ. ಅವಳ ಪರವಾಗಿ ನಿಂತಿದ್ದೇವೆ. ಸತ್ಯ ಹೇಳುವುದು ರಾಜಕಾರಣ ಅಂದರೆ, ಹೌದು ರಾಜಕಾರಣ ಮಾಡುತ್ತೇವೆ. ಸತ್ಯ ಹೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!