ಬೆಂಗಳೂರು: ನಗರದ ಯಲಹಂಕ ವಲಯ ವ್ಯಾಪ್ತಿಯಲ್ಲಿ ಬರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಆವರಣದಲ್ಲಿ ಹಮ್ಮಿಕೊಂಡಿದ್ದ ಹಸಿರು ಬೆಂಗಳೂರು ಕಾರ್ಯಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಬ್ರ್ಯಾಂಡ್ ಬೆಂಗಳೂರು ರೂಪಿಸುವ 7 ವಿಚಾರಗಳಲ್ಲಿ ಹಸಿರು ಬೆಂಗಳೂರು ಕೂಡಾ ಒಂದು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಶಾಲಾ-ಕಾಲೇಜು ಮಕ್ಕಳಿಂದ ನಗರದಾದ್ಯಂತ ಹಸಿರು ಬೆಂಗಳೂರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಇಂದು ಸಿಆರ್‌ಪಿಎಫ್ ಆವರಣದಲ್ಲಿ ಕೇಂದ್ರೀಯ ವಿದ್ಯಾಲಯದ ಸಹಯೋಗದೊಂದಿಗೆ 500 ಮಕ್ಕಳಿಂದ 500 ಸಸಿಗಳನ್ನು ನೆಟ್ಟು 3 ವರ್ಷಗಳ ಕಾಲ ಪೋಷಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು.
ಸಿಆರ್‌ಪಿಎಫ್ ಆವರಣದಲ್ಲಿ ನೆಟ್ಟಿರುವ 500 ಸಸಿಗಳಿಗೂ ಒಬ್ಬೊಬ್ಬ ವಿದ್ಯಾರ್ಥಿಯ ಹೆಸರನ್ನು ಟ್ಯಾಗ್ ಮಾಡಿದ್ದು, ಪ್ರತಿ ಸಸಿಗೂ ವೈಕ್ಷ ಕವಚ(Tree Guard) ಅಳವಡಿಸಿ 3 ವರ್ಷಗಳ ಕಾಲ ಪೋಷಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ. ಸಸಿ ಬೆಳೆದ ನಂತರ ಸಸಿ ಬೆಳೆಸಿದಂತಹ ವಿದ್ಯಾರ್ಥಿಗೆ ಹಸಿರು ರಕ್ಷಕ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ 2023-24ನೇ ವರ್ಷದಲ್ಲಿ 1 ಲಕ್ಷ ಸಸಿಗಳನ್ನು ನಡುವ ಗುರಿ ಹೊಂದಿದ್ದು, ಶೈಕ್ಷಣಿಕ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಬೆಳೆಸುವ ಜವಾಬ್ದಾರಿಯನ್ನು ನೀಡಲಾಗುವುದು. ಇದರಿಂದ ನಗರದಲ್ಲಿ ಹಸಿರೀಕರಣ ಹೆಚ್ಚಾಗಲು ಸಾಧ್ಯವಾಗುವುದರ ಜೊತೆಗೆ ಮಕ್ಕಳಲ್ಲಿ ಪರಿಸರದ ಮೇಲೆ ಹೆಚ್ಚು ಜಾಗೃತಿ ಮೂಡಲಿದೆ ಎಂದು ಹೇಳಿದರು.
ಈ ವೇಳೆ ಅರಣ್ಯ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಸರೀನಾ ಸಿಕ್ಕಲಿಗರ್, ಯಲಹಂಕ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಅರಣ್ಯ ಇಲಾಖೆಯ ಸಿಬ್ಬಂದಿ, ಸಿಆರ್‌ಪಿಎಫ್ ಅಧಿಕಾರಿಗಳು, ಕೇಂದ್ರಿಯ ವಿದ್ಯಾಲಯ ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.