ಬೆಂಗಳೂರು : ಸಿಟಿ ರವಿ ಗುತ್ತಿಗೆದಾರರು ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಳೆ ಬಿಲ್ಗೆ ಪರ್ಸಂಟೇಜ್ ಜೊತೆಗೆ ಬ್ಲಾಕ್ಮೇಲ್ ಸಹ ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಇದ್ದರೆ ಗುತ್ತಿಗೆದಾರರ ಬಿಲ್ ಕ್ಲಿಯರ್ ಮಾಡಲಿ. ಆರೋಪ ಮಾಡಿದರೆ ಧಮ್ಕಿ ಹಾಕುತ್ತಿದ್ದಾರೆ ಅಷ್ಟೇ ಎಂದು ಸಿಟಿ ರವಿ ಆರೋಪಿಸಿದರು.
ಐದು ವರ್ಷಗಳ ಬಿಲ್ಗೂ ಪರ್ಸಂಟೇಜ್ ಕೊಡಿ ಎಂದು ಬೇಡಿಕೆ ಇಡುತ್ತಿರುವುದು ಗುತ್ತಿಗೆದಾರರ ನಡುವಿನ ಗುಸು ಗುಸು ಸುದ್ದಿಯಾಗಿದೆ. ಇದನ್ನು ಅಲ್ಲಗೆಳೆಯಲು ಪತ್ರ ನಕಲಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಗುತ್ತಿಗೆದಾರರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಅದನ್ನು ನಕಲಿ ಎನ್ನಲು ಸಾಧ್ಯವೇ ಎಂದು ರವಿ ಪ್ರಶ್ನಿಸಿದ್ದಾರೆ.
ಎಷ್ಟು ಜನ ಗುತ್ತಿಗೆದಾರರಿಗೆ ಬಿಲ್ ಕ್ಲಿಯರ್ ಮಾಡಿದ್ದಾರೆ? ನಮ್ಮ ಮೇಲೆ ಆರೋಪ ಮಾದ್ದರು. ಆ ಬಗ್ಗೆ ಬೇಕಾದರೆ ತನಿಖೆ ಮಾಡಿಸಲಿ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬ್ಲಾಕ್ಮೇಲ್ ಮಾಡಲು ಯಾರಿಗೂ ಧಮ್ ಇಲ್ಲ. ಅವರೇ ಬೇಕಾದರೆ ಬೇರೆಯವರಿಗೆ ಬ್ಲಾಕ್ಮೇಲ್ ಮಾಡುತ್ತಾರೆ. ಕಮಿಷನ್ ಕೇಳ್ತಿರೋದು ನಿಜ ಎಂಬುದು ನನಗೂ ಕೇಳಿ ಬಂದಿದೆ. ಜೊತೆಗೆ ಬ್ಲಾಕ್ಮೇಲ್ ಕೂಡ ಮಾಡ್ತಿದ್ದಾರೆ. ಇವರು ಸರಿ ಇದ್ರೆ ಹಣ ಬಿಡುಗಡೆ ಮಾಡಲಿ. ಬಿಜೆಪಿ ಸರ್ಕಾರದಲ್ಲಿ ಜ್ಯುಡಿಶಿಯರಿ ಕಮಿಟಿ ರಚನೆ ಮಾಡಲಾಗಿತ್ತು. ಕಾಮಗಾರಿ ನೀಡೋ ಮೊದಲು ಸರಿ ಇದೆಯಾ ಅಂತ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಇವರು ಅಧಿಕಾರಕ್ಕೆ ಬಂದ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ? ನಮ್ಮದೇ ಹಣಕ್ಕೆ ಕಮಿಷನ್ ಕೇಳ್ತಿದ್ದಾರೆ ಅನ್ನೋದು ಅವರ ಆರೋಪ. ಈ ಸರ್ಕಾರವು ಭ್ರಷ್ಟಾಚಾರದ ಪರಾಕಾಷ್ಠೆಗೆ ತಲುಪಿದೆ ಎಂದು ಅವರು ಟೀಕಿಸಿದ್ದಾರೆ.
ಈ ಸರ್ಕಾರ ಬಂದ ಮೇಲೆ ಗೂಂಡಾಗಿರಿ, ಸ್ವ ಪಕ್ಷದ ಶಾಸಕರ ಅಸಹಾಯಕತೆ ಇದೆ. ಶಾಸಕರ ಅಸಹಾಯಕತೆ ಮಂತ್ರಿಗಳನ್ನು ಕಾಡ್ತಿದೆ. ಸಾರ್ವಜನಿಕವಾಗಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ರವಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು 6 ಜನ ಮೃತಪಟ್ಟಿದ್ದಾರೆ. ಚಿಕಿತ್ಸೆ ಕೊಡಲಾಗದಷ್ಟು ಅಸಹಾಯಕತೆ ಸರ್ಕಾರಕ್ಕೆ ಇದೆ. ಯಾದಗಿರಿಯಲ್ಲಿ ಕಲುಷಿತ ನೀರು ಎಂದೆಲ್ಲಾ ವರದಿಯಾಗಿತ್ತು. ಚಿತ್ರದುರ್ಗದಲ್ಲಿ ನಿನ್ನೆ ಆರನೇ ಸಾವು ಸಂಭವಿಸಿದೆ. ಸರ್ಕಾರ ಎರಡುವರೆ ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಎರಡೂವರೆ ತಿಂಗಳಲ್ಲೇ ಸರ್ಕಾರದ ಮೇಲೆ ಅಸಹನೆ ವ್ಯಕ್ತವಾಗಿರೋದು ಇದೇ ಮೊದಲು ಎಂದು ರವಿ ಹೇಳಿದ್ದಾರೆ.