ಬೆಂಗಳೂರು : ಹೆಚ್ಚು ತೆರಿಗೆ ಸಂಗ್ರಹವಾದರೆ, ದೇಶ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ತೆರಿಗೆ ಸಲಹೆಗಾರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯ ಆರ್ಥಿಕ ಬೆಳವಣಿಗೆ ಹೊಂದಲು ಬಯಸುತ್ತಾನೆ. ನಾನು ಹಣಕಾಸು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ನಾನು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮನಸ್ಸು ಮಾಡಿದರೆ ಯಾವುದು ಕಷ್ಟವಲ್ಲ ಎಂದು ಯೋಚಿಸಿ ಕಾರ್ಯ ಪ್ರವೃತ್ತನಾದೆ. ಮೂರು ತಿಂಗಳಲ್ಲಿ ಶೇ 70 ರಷ್ಟು ಆದಾಯ ಹೆಚ್ಚಳ ಮಾಡಿದೆ. ರಾಜ್ಯದ ಆದಾಯ ಹೆಚ್ಚಿಸಿ ಎರಡು ವರ್ಷದ ಅವಧಿಯಲ್ಲಿ ಹೆಚ್ಚುವರಿ ಬಜೆಟ್ ಮಂಡನೆ ಮಾಡಿದೆ. ಈಗಿನ ಸರ್ಕಾರ ಉಚಿತ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದು, ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಆರ್ಥಿಕತೆ ಬೆಳವಣಿಗೆಯಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದೆ. ಆರ್ಥಿಕತೆ ಯಾವುದೇ ಒತ್ತಡವಿಲ್ಲದೇ ಬೆಳೆಯುವಂತಾಗಬೇಕು. ಆದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಗುರಿ ಮುಟ್ಟುವ ಕನಸು ಸಾಧ್ಯವಾಗಲಿದೆ. ಆರಂಭದ ದಿನಗಳಲ್ಲಿ ಬಹುತೇಕರು ಜಿಎಸ್ಟಿ ವಿರೋಧಿಸಿದ್ದರು. ಆದರೆ ಈಗ ಎಲ್ಲರೂ ಒಪ್ಪಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದರು.