ಬೆಂಗಳೂರು : ರಾಜಧಾನಿ ಬೆಂಗಳೂರಿನ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೀಕರಣದ ಪುನಾರಾರ್ವತನೆ ತಪ್ಪಿಸುವುದಕ್ಕೆ ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಮೂಲಕ ಪ್ರತಿಯೊಂದು ಬೀದಿ ನಾಯಿಯ ದತ್ತಾಂಶ ದಾಖಲೆಯನ್ನು ಡಿಜಿಟಲಿಕರಣಗೊಳಿಸುವ ಸಿದ್ಧತೆಯನ್ನು ಬಿಬಿಎಂಪಿ ನಡೆಸಿದೆ.
ನಗರದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ಈ ನಾಯಿಗಳಿಗೆ ಪ್ರತಿ ವರ್ಷ ಸಂತಾನಹರಣ ಚಿಕಿತ್ಸೆ, ಆಯಂಟಿ ರೇಬಿಸ್ ಸೇರಿದಂತೆ ವಿವಿಧ ರೋಗಗಳಿಗೆ ಲಸಿಕೆ, ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಯಾವ ನಾಯಿಗೆ ಈಗಾಗಲೇ ಸಂತಾನ ಹರಣ ಶಸ್ತ್ರಚಿಕಿತ್ಸೆ, ಆಯಂಟಿ ರೇಬಿಸ್ ಲಸಿಕೆ ನೀಡಲಾಗಿದೆ. ಯಾವ ನಾಯಿಗೆ ನೀಡಿಲ್ಲ ಎಂಬುದು ತಿಳಿಯುವುದು ಕಷ್ಟ.
ಹೀಗಾಗಿ, ಪ್ರತಿ ವರ್ಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಯಂಟಿ ರೇಬಿಸ್ ಲಸಿಕೆ ನೀಡುವ ಪ್ರಕ್ರಿಯೆ ಪುನರಾವರ್ತನೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ತಪ್ಪಿಸುವುದರೊಂದಿಗೆ ಬಿಬಿಎಂಪಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ತಡೆಗಟ್ಟಲು ಪಾಲಿಕೆ ಪಶುಪಾಲನಾ ವಿಭಾಗವು ನಗರದಲ್ಲಿರುವ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪ್ರಾಯೋಗಿಕವಾಗಿ 100 ನಾಯಿಗೆ ಚಿಪ್ :
ನಗರದ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೂ ಮುನ್ನ ಪ್ರಾಯೋಗಿಕವಾಗಿ ನಗರದ ಒಂದು ನಿರ್ದಿಷ್ಟಬಡಾವಣೆ ಅಥವಾ ಪ್ರದೇಶದ 100 ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಹಾಕಲು ಚಿಂತನೆ ನಡೆಸಲಾಗಿದೆ. ಮೈಕ್ರೋ ಚಿಪ್‌ನ ಕಾರ್ಯ ವೈಖರಿ ಯಶಸ್ವಿಯಾದರೆ, ನಗರದ ಎಲ್ಲಾ ಬೀದಿ ನಾಯಿಗಳಿಗೆ ಅಳವಡಿಸಲು ಪಾಲಿಕೆ ಪಶುಪಾಲನಾ ವಿಭಾಗ ಚಿಂತನೆ ನಡೆಸಿದೆ.