ಬೆಂಗಳೂರು : ಆಗಸ್ಟ್ 7ರಿಂದ ರಾಜ್ಯದಾದ್ಯಂತ ‘ಮಿಷನ್ ಇಂದ್ರಧನುಷ್ 5.0’ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಅಭಿಯಾನದಡಿ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ದಡಾರ, ರುಬೆಲ್ಲಾ ಲಸಿಕೆ ಸೇರಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿನ ಎಲ್ಲಾ ಲಸಿಕೆಗಳನ್ನು ನೀಡಲಾಗುತ್ತದೆ.
ಈ ಲಸಿಕಾ ಕಾರ್ಯಕ್ರಮವನ್ನು ಬಲಪಡಿಸಲು ಜಿಲ್ಲೆಗಳನ್ನು ಹೆಚ್ಚಿನ ಅಪಾಯದ, ಮಧ್ಯಮ ಅಪಾಯದ ಹಾಗೂ ಕಡಿಮೆ ಅಪಾಯದ ಎಂದು ವಿಂಗಡಿಸಲಾಗಿದೆ ಎಂದರು.
ಅಭಿಯಾನದಲ್ಲಿ 5 ವರ್ಷದೊಳಗಿನ 1.65 ಲಕ್ಷ ಮಕ್ಕಳಿಗೆ ಹಾಗೂ 32,917 ಗರ್ಭಿಣಿಯರಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಒಟ್ಟು ಫಲಾನುಭವಿಗಳಲ್ಲಿ 1.03 ಲಕ್ಷ ಮಕ್ಕಳು ಹಾಗೂ 19,797 ಗರ್ಭಿಣಿಯರು ಹೆಚ್ಚಿನ ಅಪಾಯದ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಬಾಗಲಕೋಟೆ, ಬಳ್ಳಾರಿ, ಬಿಬಿಎಂಪಿ, ಬೆಂಗಳೂರು ನಗರ, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಕೋಲಾರ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯನ್ನು ಹೆಚ್ಚಿನ ಅಪಾಯದ ಜಿಲ್ಲೆಗಳೆಂದು ಗುರುತಿಸಲಾಗಿದೆ ಎಂದು ಹೇಳಿದರು.