ಬೆಂಗಳೂರು: ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ಬಿಟ್ಟು ಬಿಡದೇ ಜಿಟಿ ಜಿಟಿ ಮಳೆ ಶುರುವಾಗಿದೆ. ಇಡೀ ಬೆಂಗಳೂರು ಕೂಲ್ ಕೂಲ್ ಆಗಿಬಿಟ್ಟಿದೆ. ಇದರಿಂದ ಹಲವು ಅಂಟು ರೋಗಗಳು ಕಾಣಿಸಿಕೊಳ್ಳುತ್ತಿವೆ. ಇನ್ನು ಬಿಸಿಲು-ಮಳೆ, ಮೋಡ ಕವಿದ ವಾತಾವರಣದಿಂದಾಗಿ ಕಂಜಂಟಿವೈಟಿಸ್ ಅಥವಾ ಮದ್ರಾಸ್ ಐ ಪ್ರಕರಣ ಹೆಚ್ಚಳವಾಗಿದೆ.
ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳಾದ ಮಿಂಟೊ, ನಾರಾಯಣ ನೇತ್ರಾಲಯ, ಡಾ.ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಕಣ್ಣಿನ ಆಸ್ಪತ್ರೆ ಸೇರಿದಂತೆ ಹೊರ ರೋಗಿಗಳ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗುತ್ತಿದೆ. ಕಳೆದೊಂದು ತಿಂಗಳಿಂದ ನಗರದಲ್ಲಿ ಬಿಸಿಲು-ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಳವಗಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾದರೆ, ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಆಗಿದೆ. ಚಳಿಯ ವಾತಾವರಣವಿದ್ದು, ವೇಗವಾಗಿ ಈ ವೈರಾಣು ಹರಡುತ್ತಿದೆ.
ಇನ್ನು ನೇತ್ರ ಚಿಕಿತ್ಸಾಲಯಗಳಿಗೆ ಭೇಟಿ ನೀಡುತ್ತಿರುವ ಹೊರರೋಗಿಗಳಲ್ಲಿ ಶೇ 20 ರಷ್ಟು ಮಂದಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳಿಗೆ ಜನ ಆಸ್ಪತ್ರೆಗಳತ್ತ ಮೊರೆ ಹೋಗುತ್ತಿದ್ದಾರೆ.
‘ಮದ್ರಾಸ್ ಐ’ ಸಮಸ್ಯೆ ಹಿರಿಯರಿಗಿಂತಲೂ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮಿಂಟೊ ಆಸ್ಪತ್ರೆಗೆ ಪ್ರತಿ ನಿತ್ಯ 400ರಿಂದ 600 ಹೊರರೋಗಿಗಳು ಭೇಟಿ ಕೊಡುತ್ತಿದ್ದಾರೆ. 90 ರಿಂದ 100 ರೋಗಿಗಳಲ್ಲಿ ಈ ಸಮಸ್ಯೆ ದೃಢಪಟ್ಟಿದೆ. ನಾರಾಯಣ ನೇತ್ರಾಲಯದಲ್ಲಿ ಪ್ರತಿನಿತ್ಯ ಸರಾಸರಿ 20 ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿದು ಬಂದಿದೆ.
‘ಮದ್ರಾಸ್ ಐ’ ಲಕ್ಷಣಗಳು
- ಕಣ್ಣುಗುಡ್ಡೆಯ ಊತ
- ರೆಪ್ಪೆ ಅಂಟಿಕೊಳ್ಳುವುದು
- ಕಣ್ಣಿನ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು
- ಕಣ್ಣಲ್ಲಿ ಅತಿಯಾಗಿ ನೀರು ಬರುವಿಕೆ
- ಕಣ್ಣು ಅತಿಯಾಗಿ ತುರಿಕೆ ಆಗುವಿಕೆ
ಮುನ್ನೆಚ್ಚರಿಕೆ ಕ್ರಮಗಳು
- ಕಣ್ಣು ಮತ್ತು ಕೈಗಳ ನಡುವಿನ ಸಂಪರ್ಕ ತಡೆಯಬೇಕು
- ಕೈಗಳಿಂದ ಕಣ್ಣುಗಳ ಸ್ಪರ್ಶ ತಡೆಯಲು ಕನ್ನಡಕ ಹಾಕಿಕೊಳ್ಳಬಹುದು
- ಕಣ್ಣುಗಳ ಆಯಾಸ ತಡೆಯಲು ಟಿ.ವಿ, ಮೊಬೈಲ್ ವೀಕ್ಷಣೆ ಕಡಿಮೆ ಮಾಡುವುದು
- ಸೋಂಕಿತ ವ್ಯಕ್ತಿ ಬಳಸಿದ ಟವೆಲ್ ಸೇರಿ ವಿವಿಧ ವಸ್ತುಗಳನ್ನು ಬಳಸದಿರುವುದು