ಸಾಗರ : ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣರವರು ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಅಜ್ಜಿಯೊಬ್ಬಳು ಕಾಣ ಸಿಕ್ಕಿದ್ದಾಳೆ. ಜನ ಸಿಕ್ಕಾಗ ಎಂತದಾ ಸಮಾಚಾರ ಎಂದು ಮಾತಿಗಿಳಿವ ಬೇಳೂರು ಗೋಪಾಲಕೃಷ್ಣ, ಅಜ್ಜಿಯನ್ನು ಕಂಡು ಎಲ್ಲಿಗೆ ಹೊಗ್ತಿದ್ದಿ, ನಟ್ಟಿಗೆ ಬಂದಿದ್ಯಾ ಎಂದು ವಿಚಾರಿಸಿದ್ಧಾರೆ.
ಅಲ್ಲದೆ ಅಜ್ಜಿ ಕುಳಿತಿದ್ದ ರಸ್ತೆ ಬದಿಯ ಕಟ್ಟೆ ಮೇಲೆ ಕುಳಿತು, ವೃದ್ಧೆಯ ಪೂರ್ವಪರ ವಿಚಾರಿಸಿದ್ದಾರೆ. ಈ ವೇಳೆ ತಾಯಿ, ತನ್ನ ವಿವರಗಳನ್ನು ನೀಡುತ್ತಾ, ಹೀಗೆ ಹೋಗುತ್ತಿರುತ್ತೇನೆ, ವಯಸ್ಸಾಯ್ತು ನಟ್ಟಿ ಮಾಡಕ್ಕಾಗಲ್ಲ, ಯಾರಾದರೂ ಗಾಡಿಯಲ್ಲಿ ಕರೆದುಕೊಂಡು ಹೋದರೆ ಹೋಗುತ್ತೇನೆ ಎಂದೆಲ್ಲಾ ಹೇಳಿದ್ಧಾಳೆ.
ಎಲ್ಲವನ್ನು ಆಲಿಸಿದ ಶಾಸಕರು ನಾನ್ಯಾರು ಗೊತ್ತಾ ನಿನಗೆ ಎಂದು ಕುತೂಹಲಕ್ಕೆ ಪ್ರಶ್ನಿಸಿದ್ದಾಳೆ. ಎಂಎಲ್ಎಯವರ ಪ್ರಶ್ನೆಗೆ ಮರುಕ್ಷಣದಲ್ಲಿಯೇ ನಿ ಯಾರೆಂದು ಗೊತ್ತಾಗ್ಲ ನಂಗೆ ಎಂದು ಹೇಳಿದ್ದಾಳೆ. ಇದಕ್ಕೆ ಶಾಸಕರು ನಾನು ಗೋಪಾಲಕೃಷ್ಣ ಬೇಳೂರು ಎಂದು ಪರಿಚಯಿಸಿಕೊಂಡಿದ್ದಾರೆ. ಹೆಸರನ್ನಷ್ಟೆ ತಿಳಿದಿದ್ದ ಅಜ್ಜಿ, ದೇವರು ನಿನಗೆ ಒಳ್ಳೆಯದು ಮಾಡ್ಲಪ್ಪ ಎಂದು ಬೇಳೂರುರವರ ಕೈಯನ್ನ ಹಿಡಿದು ಹಣೆಗೆ ಒತ್ತಿಕೊಂಡಿದ್ದಾಳೆ.
ಯಾರಿಗೆ ವೋಟು ಹಾಕಿದ್ದಿ..
ಜೀವಾನುಭವದ ಮಾಗಿದ ಮಾತುಗಳನ್ನ ಆಡುತ್ತಿದ್ದ ಅಜ್ಜಿ ಜೊತೆಗೆ ಇನ್ನಷ್ಟು ಹರಟಿದ ಶಾಸಕರು, ಯಾರಿಗೆ ವೋಟ್ ಹಾಕಿದ್ದಿ ಎಂದು ಕೇಳಿದ್ದಾರೆ. ಇದಕ್ಕೆ ಅಜ್ಜಿ ತನ್ನ ಕೈ ತೋರಿಸುತ್ತಾ ಅಭಯಹಸ್ತವನ್ನು ತೋರಿಸಿದ್ದಾಳೆ. ನನಗೆ ಹಾಕಿದ್ಧಾಳಂತೆ ಕಣ್ರೋ ಎಂದು ಶಾಸಕರು ತಮ್ಮವರಿಗೆ ಹೇಳಿದ್ಧಾರೆ. ಈ ಮಧ್ಯೆ ಮಾತು ಮುಂದುವರಿಸಿದ ಅಜ್ಜಿ, ನಾನು ವೋಟು ಹಾಕಿದ್ದೀನಿ ಎಂದು ಹೇಳುತ್ತಾ ವಿವರಣೆಕೊಟ್ಟಿದ್ಧಾಳೆ. ಅದೇ ಸಂದರ್ಭದಲ್ಲಿ ಅಲ್ಲಿದ್ದ ಕಾರ್ಯಕರ್ತರು, ಶಾಸಕರು ಗೆದ್ದಿದ್ದಾರೆ ಎಂದಿದ್ದಾರೆ. ಆಗ ಅಜ್ಜಿ ಹೌದು , ನಮ್ಮ ಊರೆಲ್ಲೆಲ್ಲಾ ಪಟಾಕಿ ಹೊಡೆದಿದ್ದಾರೆ ಎಂದಿದ್ಧಾಳೆ. ಇದನ್ನ ಕೇಳಿದ ಶಾಸಕರು ನಕ್ಕು, ಅಜ್ಜಿಗೆ ನೆರವಿನ ಆಸರೆಯ ಆಶ್ವಾಸನೆ ಕೊಟ್ಟು ಅಲ್ಲಿಂದ ಮುಂದಕ್ಕೆ ಸಾಗಿದ್ದಾರೆ.