ಹಾವೇರಿ: (ಶಿಗ್ಗಾವಿ) ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಮಾತ್ರ ಗ್ರಾಮ ಸ್ವರಾಜ್ಯ ಮಾಡಲು ಸಾಧ್ಯವಾಗಲಿದ್ದು, ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಭಾನುವಾರ ಶಿಗ್ಗಾಂವಿ ಸವಣೂರು ಮತ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ನೇರವೆರಿಸಿ ಮಾತನಾಡಿದ ಅವರು, ಫೆಬ್ರವರಿ ತಿಂಗಳ ಬಜೆಟ್ ನಲ್ಲಿ ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ಆರವತ್ತು ಲಕ್ಷಕ್ಕೂ ಹೆಚ್ಚು ಹಣ ನೀಡುವ ತಿರ್ಮಾನ ಮಾಡಿದ್ದೇವು. ಆದರೆ, ಈಗಿನ ಸರಕಾರ ಅದನ್ನು ನಿಲ್ಲಿಸಿದೆ. ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ನೀಡಿರುವ ಅನುದಾನವನ್ನು ನೀಡುವಂತೆ ಸರಕಾರಕ್ಕೆ ಆಗ್ರಹಿಸುವುದಾಗಿ ಹೇಳಿದರು.
ನಿಜವಾದ ಭಾರತದ ಸ್ವರಾಜ್ಯ ಗ್ರಾಮದಲ್ಲಿದೆ ಎನ್ನುವ ಗಾಂಧಿಜಿಯವರು ಕನಸು ಕಂಡಂತೆ ಗ್ರಾಮಗಳು ಅಭಿವೃದ್ಧಿಯಾದರೆ ಭಾರತದ ಅಭಿವೃದ್ಧಿ ಆದಂತೆ ಎಂದರು. ನಮ್ಮ ಅವಧಿಯಲ್ಲಿ ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 250 ಕೋಟಿ ಅನುದಾನ ನೀಡಿದ್ದೇವು. ಆದರೆ, ಈ ಸರಕಾರ ಆ ಅನುದಾನವನ್ನು ಸ್ಥಗಿತಗೊಳಿಸಿದೆ. ಪ್ರತಿ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸಲು ನಾವು ಜಲಜೀವನ ಮಿಷನ್ ಜಾರಿ ಮಾಡಿದ್ದೇವು ಆದರೆ, ಈ ಸರ್ಕಾರ ಬಂದ ನಂತರ ಕುಂಠಿತಗೊಂಡಿದೆ. ನಾವು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವು. ಆದರೆ, ಈ ಸರಕಾರ ಮಂದಗತಿಯಲ್ಲಿದೆ ಹೆಚ್ಚಿನ ಪ್ರಮಾಣದ ಹಣವನ್ನು ಬೀಡಗಡೆ ಮಾಡಿದರೆ ಮಾತ್ರ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ. ಅದನ್ನು ಸರಕಾರ ಮಾಡಬೇಕು ಎಂದು ಹೇಳಿದರು.