ಬೆಂಗಳೂರು : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಮಂದಿರ ನಿರ್ಮಾಣದ ಗುತ್ತಿಗೆಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದೆ ಎಂದು ಆರೋಪಿಸಿ, ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ಪ್ರಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್, ‘ರಾಜಸ್ತಾನ ಮೂಲದ ಇಕ್ಬಾಲ್ ಮಿಸ್ತ್ರಿ ಎಂಬಾತನ ಕಂಪನಿಗೆ ದೇವಸ್ಥಾನ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ಆ ಮೂಲಕ ರಾಮಮಂದಿರ ಟ್ರಸ್ಟ್ ಆಡಳಿತ ಮಂಡಳಿ ದೇಶದ ನೂರು ಕೋಟಿ ಹಿಂದೂಗಳಿಗೆ ಅವಮಾನ ಮಾಡಿದೆ. ರಾಮಮಂದಿರ ಟ್ರಸ್ಟಿಗಳಲ್ಲಿ ಒಬ್ಬರಾದ ಪೇಜಾವರ ಶ್ರೀಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ದೇವಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಂ ಕೆಲಸಗಾರರನ್ನು ಹೊರಹಾಕಬೇಕು ಎಂದು ಆಗ್ರಹಿಸಿದ್ದೇವೆ’ ಎಂದರು.
‘ಅಲ್ಲಾ ಒಬ್ಬನೆ ದೇವರು.. ಎನ್ನುವವರಿಗೆ ರಾಮನ ಗುಡಿ ನಿರ್ಮಾಣಕ್ಕೆ ಅವಕಾಶ ಹೇಗೆ ನೀಡಿದರು? ಗೋ ಮಾಂಸ ಭಕ್ಷಕರು ಹಾಗೂ ಹಿಂದೂ ದೇವರನ್ನ ನಂಬದವರಿಗೆ ಗುತ್ತಿಗೆ ಹೇಗೆ ಕೊಟ್ಟಿದ್ದೀರಿ? ಅವರನ್ನು ಕೂಡಲೇ ಅಲ್ಲಿಂದ ವಾಪಸ್ ಕಳಿಸಬೇಕು. ಅವರು ದೇವಸ್ಥಾನದ ಆವರಣದಿಂದ ವಾಪಸ್ ಆದ ಬಳಿಕ ನಾವು ಅಲ್ಲಿಗೆ ತೆರಳಿ ಶುದ್ದೀಕರಣ ಮಾಡ್ತೇವೆ. ಈ ಬಗ್ಗೆ ಶ್ರೀಗಳಿಗೆ ಮನವಿ ಮಾಡಲಾಗಿದೆ’ ಎಂದರು.
‘ಕೂಡಲೇ ರಾಮಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಂ ಗುತ್ತಿಗೆದಾರರನ್ನ ಹೊರಹಾಕಬೇಕು. ಅನ್ಯ ಧರ್ಮದ ವ್ಯಕ್ತಿಗಳಿಗೆ ಗುತ್ತಿಗೆ ನೀಡಿರುವುದು ಇಡೀ ವಿಶ್ವಕರ್ಮ ಸಮಾಜಕ್ಕೆ ಅಪಮಾನ ಮಾಡಿದ ಹಾಗೆ’ ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
‘ರಾಮಮಂದಿರಕ್ಕಾಗಿ ಕಳೆದ 500 ವರ್ಷಗಳ ನಿರಂತರ ಹೋರಾಟವಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭವಾಗುವವರೆಗೆ ಅನೇಕ ಘಟನೆಗಳು ನಡೆದಿವೆ. ಸುದೀರ್ಘ ಹೋರಾಟದ ಬಳಿಕ ಸುಪ್ರೀಂ ಕೋರ್ಟ್‌ನಿಂದ ಹಿಂದೂಗಳ ಪರವಾಗಿ ತೀರ್ಪು ಬಂದಿದೆ. ಜಾಗದ ವಿಚಾರದಲ್ಲಿ ಅಡ್ಡ ಬಂದಿದ್ದು ಮುಸ್ಲಿಂ ಸಮುದಾಯ; ಬಾಬರ್‌ನ ಮಸೀದಿ ಎಂದು ಹಠ ಹಿಡ್ದಿದ್ದು ಅದೇ ಸಮುದಾಯ. ಕೋರ್ಟ್ ತೀರ್ಪಿನ ನಂತರವೂ ಕೂಡ ಬಾಬರ್ ಮಸೀದಿ ಪುನರ್ ನಿರ್ಮಾಣದ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಅಂತವರಿಗೆ ದೇವಸ್ಥಾನ ನಿರ್ಮಾಣದ ಗುತ್ತಿಗೆ ನೀಡಿ ಅಕ್ಷಮ್ಯ ಅಪರಾಧ ಎಸಗಲಾಗಿದೆ. ದೇಶದಲ್ಲಿ ಐದು ಬಾರಿ ಭಯೋತ್ಪಾದಕರ ದಾಳಿ ಆಗಿದೆ. ಇಷ್ಟು ಇದ್ದರೂ ಮುಸಲ್ಮಾನರಿಗೆ ಟೆಂಡರ್ ಕೊಡಲಾಗಿದೆ. ನಮ್ಮ ಬಳಿ ವಿಡಿಯೋ ದಾಖಲೆಗಳಿವೆ; ಕೂಡಲೇ ದೇವಸ್ಥಾನ ನಿರ್ಮಾಣದ ಟೆಂಡರ್ ರದ್ದು ಮಾಡಿ, ಮುಸ್ಲಿಂ ಕೆಲಸಗಾರರನ್ನ ಹೊರಗೆ ಹಾಕಬೇಕು. ಉಡುಪಿಯಲ್ಲಿ ಹಿಜಾಬ್ ಪ್ರಕರಣದ ಐವರಲ್ಲಿ ಒಬ್ಬ ವಿಧ್ಯಾರ್ಥಿನಿ ಟ್ವಿಟ್ ಮಾಡಿ ಬಾಬರ್ ಮಸೀದಿ ನಿರ್ಮಾಣದ ಬಗ್ಗೆ ಮಾತಾಡ್ತಾರೆ’ ಎಂದರು.