ಶಿವಮೊಗ್ಗ : ಕೊಲ್ಲೂರು ಸಮೀಪ ಅರಿಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಭದ್ರಾವತಿಯ ಶರತ್ ಮೃತದೇಹ ಪತ್ತೆಯಾಗಿದೆ. ಶರತ್ ಬಿದ್ದಿದ್ದ ಜಾಗದಿಂದ 200 ಮೀಟರ್ ದೂರದಲ್ಲಿ ಪೊಟರೆಯಲ್ಲಿ ಮೃತದೇಹ ಸಿಕ್ಕಿದೆ. ವಿಚಾರ ತಿಳಿಯುತ್ತಿದ್ದಂತೆ ಭದ್ರಾವತಿಯಲ್ಲಿರುವ ಶರತ್ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಭದ್ರಾವತಿಯ ಶರತ್ ಮತ್ತು ಆತನ ಸ್ನೇಹಿತ ಜು.23ರಂದು ಕೊಲ್ಲೂರು ಸಮೀಪ ಅರಿಶಿನಗುಂಡಿ ಜಲಪಾತ (ವೀಕ್ಷಣೆಗೆ ತೆರಳಿದ್ದರು. ಬಂಡೆಯೊಂದರ ಮೇಲೆ ಶರತ್ ನಿಂತು ಜಲಪಾತ ವೀಕ್ಷಣೆ ಮಾಡುವುದನ್ನು ಸ್ನೇಹಿತ ಚಿತ್ರೀಕರಿಸುತ್ತಿದ್ದ. ಈ ವೇಳೆ ಶರತ್ ಕಾಲು ಜಾರಿ ಅರಿಶಿನಗುಂಡಿ ಜಲಪಾತಕ್ಕೆ ಬಿದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಶರತ್ ಕಾಲು ಜಾರಿ ಬಿದ್ದಾಗಿನಿಂದ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ (NDRF) ತಂಡ, ಮುಳುಗು ತಜ್ಞರಾದ ಈಶ್ವರ್ ಮಲ್ಪೆ, ಸಾಹಸಿ ಜ್ಯೋತಿರಾಜ್ ಸೇರಿದಂತೆ ಹಲವರು ಶೋಧ ಕಾರ್ಯ ನಡೆಸಿದ್ದರು. ಜೋರು ಮಳೆ ಇದ್ದ ಕಾರಣ ಡ್ರೋಣ್ ಬಳಕೆ ಮಾಡಿ ಹುಡುಕಾಟ ನಡೆಸಲಾಗಿತ್ತು. ಮಳೆ ಅಬ್ಬರ ಕಡಿಮೆಯಾಗಿರುವುದರಿಂದ ಶೋಧ ಕಾರ್ಯ ಬಿರುಸಾಗಿತ್ತು. ಭಾನುವಾರ ಜಲಪಾತದಿಂದ 200 ಮೀಟರ್ ದೂರದಲ್ಲಿ ಪೊಟರೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶರತ್ ಮೃತದೇಹ ಪತ್ತೆಯಾಗಿದೆ.
ಮನೆಗೆ ಸಂಸದ ರಾಘವೇಂದ್ರ ಭೇಟಿ…
ಇನ್ನು, ವಿಷಯ ತಿಳಿಯುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದ್ರ ಭದ್ರಾವತಿಯಲ್ಲಿರುವ ಶರತ್ ಮನೆಗೆ ಭೇಟಿ ನೀಡಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಉಡುಪಿ ಜಿಲ್ಲಾಡಳಿತಕ್ಕೆ ಕರೆ ಮಾಡಿ, ತಕ್ಷಣ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಭದ್ರಾವತಿಗೆ ರವಾನಿಸಲು ವ್ಯವಸ್ಥೆ ಮಾಡಿ. ಇದರಿಂದ ಮುಂದಿನ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದು ಸೂಚನೆ ನೀಡಿದರು.
ನೋವಿನಲ್ಲಿ ‘ಒಂದು ಮನವಿ’ ಸಲ್ಲಿಕೆ..
ಸಂಸದ ರಾಘವೇಂದ್ರ ಅವರ ಮುಂದೆ ಅಳಲು ತೋಡಿಕೊಂಡ ಶರತ್ ಅವರ ತಂದೆ ಮುನಿಸ್ವಾಮಿ, ಇಂತಹ ಜಲಪಾತಗಳಿಗೆ, ಅಪಾಯಕಾರಿ ಸ್ಥಳಗಳಿಗೆ ಸಾರ್ವಜನಿಕರು ಹೋಗದಂತೆ ನಿಷೇಧ ವಿಧಿಸಿ. ತಮ್ಮ ಮಗನಿಗಾದ ಪರಿಸ್ಥಿತಿ ಮತ್ಯಾರಿಗು ಆಗಬಾರದು ಎಂದು ಮನವಿ ಮಾಡಿದರು. ಶರತ್, ಭದ್ರಾವತಿ ಕೆ.ಹೆಚ್.ನಗರದ ಸುಣ್ಣದಹಳ್ಳಿ ನಿವಾಸಿ. ಮುನಿಸ್ವಾಮಿ ಮತ್ತು ರಾಧಾ ದಂಪತಿಯ ಪುತ್ರ. ಮೃತದೇಹ ಸಿಕ್ಕಿರುವ ವಿಚಾರ ತಿಳಿದು ಶರತ್ ಮನೆಯಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.