ಬೆಂಗಳೂರು: ನಾವು ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಪ್ರಕೃತಿ ಸೊಬಗನ್ನು ಸವಿಯಬಹುದು. ಆದರೆ ನಮ್ಮದೇ ಮನೆಯ ಪಕ್ಕದ, ಊರಿನ ಪ್ರಕೃತಿಯ ವೈಭವವೂ ಯಾವುದಕ್ಕೂ ಕಡಿಮೆ ಇರುವುದಿಲ್ಲ ಎಂಬುದನ್ನು ಮರೆಯಬಾರದು. ಇದಕ್ಕೆ ತಾಜಾ ತಾಜಾ ಉದಾಹರಣೆ ನಮ್ಮ ಬೆಂಗಳೂರಿನ ಸೌಂದರ್ಯ..=
ಪ್ರತಿಯೊಂದು ಋತುವಿಗೂ ಅದರದೇ ಸೊಬಗಿದೆ. ಚಳಿಗಾಲ ಆರಂಭವಾಯಿತೆಂದರೆ ಕಬ್ಬನ್ ಪಾರ್ಕ್ನಲ್ಲಿ ಹೋಗಳ ಲೋಕವೇ ಅರಳುತ್ತದೆ. ಅರೆ! ಇದೇನು ಚಳಿಗಾಲದಲ್ಲಿ ಯಾವ ಹೂ ಅರಳೋದು ಎಂದು ಆಶ್ಚರ್ಯವಾಯಿತೇ? ಹೌದು, ಅಮೆರಿಕ ಮೂಲದ ‘ಪಿಂಕ್ ಪೋಯಿ’ ( ಟಬಿಬಿಯಾ ರೋಸಿಯಾ ಅಥವಾ ರೋಸಿ ಟ್ರಂಪೆಟ್ ಟ್ರೀ) ಮಾಗಿಯ ಚಳಿಗೆ ಅರಳಿ ನಿಂತಿದ್ದು, ಪುಷ್ಪಪ್ರಿಯರ ಮನಸಿಗೆ ಮುದ ನೀಡುತಿವೆ.
ಪಿಂಕ್ ಪೋಯ್ ಅಥವಾ ಟಬಿಬಿಯಾ ರೋಸಿಯಾ ಎಂಬ ಹೆಸರಿನಿಂದ ಕರೆಯುವ ಪಿಂಕ್ ಬಣ್ಣದ ಈ ಹೂವುಗಳು ಈಗ ಪ್ರಕೃತಿ ಪ್ರಿಯರನ್ನ ಹೆಚ್ಚೆಚ್ಚು ಸೆಳೆಯುತ್ತಿದೆ. ಕಬ್ಬನ್ ಪಾರ್ಕ್ನಲ್ಲಿ ಪಿಂಕ್ ಪುಷ್ಪಗಳು ಸೃಷ್ಟಿಸಿರುವ ಹೂವಿನ ಲೋಕ ಅನಾವರಣಗೊಂಡಿದೆ.
ಇನ್ನು ಬೆಂಗಳೂರು ಮಂದಿಯನ್ನ ಕಣ್ಮನ ಸೆಳೆಯುತ್ತವೆ ಈ ಹೂಗಳು. ಅದರಲ್ಲೂ ಪುಟ್ಟ ಮಕ್ಕಳಿರುವ ತಂದೆ-ತಾಯಿಗಳು ತಮ್ಮ ಮಕ್ಕಳೊಂದಿಗೆ ಈ ಹೂವನ್ನು ನೋಡಿ ಆನಂದಿಸುತ್ತಾರೆ. ಕಲರ್ ಫುಲ್ ಆಗಿ ಕಂಗೊಳಿಸುವ ಈ ಹೂವುಗಳ ಮುಂದೆ ನಿಂತು ಸೆಲ್ಪಿ ತಗೆದು ಸಂಭ್ರಮಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಜೊತೆಗೆ ಸಾರ್ವಜನಿಕರ ಖುಷಿಗೆ ಪಾರವೆ ಇಲ್ಲದಂತಾಗಿದೆ ..
ಚಳಿಗಾಲದಲ್ಲಿ ಕಂಪು ಬೀರುವ ಟಬಿಬಿಯಾ ರೋಸಿಯಾದಲ್ಲಿ ಹಲವು ಬಗೆಯ 90 ಕ್ಕೂ ಹೆಚ್ಚು ತಳಿಗಳಿವೆ. ಇದು ಕ್ಯೂಬಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೆಕ್ಸಿಕೊ, ಕೆರಿಬಿಯನ್, ಅರ್ಜೆಂಟೀನಾ, ಅಮೆರಿಕ ಸೇರಿದಂತೆ ಉಪಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇನ್ನು ಇಡೀ ಮರದಲ್ಲಿ ಒಂದೂ ಎಲೆಗಳಿಲ್ಲ. ಮರದ ತುಂಬೆಲ್ಲ ಪಿಂಕ್ ಹೂಗಳೇ ಅರಳಿ ನಿಂತಿವೆ. ಇಡೀ ಮರವೇ ಒಂದು ಗುಲಾಬಿ ಛತ್ರಿಯಂತೆ ನಯನಮನೋಹರವಾಗಿ ಕಾಣುತ್ತದೆ.
ವರದಿ: ವರ್ಷಿತಾ ತಾಕೇರಿ