ತುಮಕೂರು : ಅತಿಯಾದ ಭಾರದಿಂದ ಅಪ್ ಹತ್ತಲಾಗದೇ ಲಾರಿ ತಲೆ ಎತ್ತಿನಿಂತ ಘಟನೆ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಜರುಗಿದೆ.
ಕೆಎ 03 ಎಎ 1911 ಸಂಖ್ಯೆ ಹೊಂದಿರುವ ಲಾರಿ ಅತಿ ಭಾರದ ಮರದ ದಿಮ್ಮಿಗಳನ್ನು ಸಾಗಿಸುತ್ತಿತ್ತು. ಟೌನ್ ಹಾಲ್ ವೃತ್ತದ ಸಿಗ್ನಲ್ ಬಳಿ ಬರುತ್ತಿದ್ದಂತೆ ಅಪ್ ಹತ್ತಲು ಸಾಧ್ಯವಾಗದೇ ತಲೆ ಎತ್ತಿ ನಿಂತ ದೃಶ್ಯ ಸೆರೆಯಾಗಿದೆ. ಮುಂದೆ ಸಾಗಲು ಜರ್ಕ್ ಹೊಡೆದ ಸಂದರ್ಭದಲ್ಲಿ ಹಿಂದಕ್ಕೆ ಮರದ ದಿಮ್ಮಿಗಳು ಜಾರಿದ್ದು, ಸ್ಥಳದಲ್ಲಿ ಕೆಲಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಲಾರಿ ಸಾಗಿಸಲು ಪೋಲಿಸರು ನೆರವಾದರು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗಿಡ್ಡಾಪುರ ಬಳಿ ಖಾಸಗಿ ಬಸ್ ಪಲ್ಟಿಯಾಗಿ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ.
ನಾಯಕನಹಟ್ಟಿಯಿಂದ ಗರಣಿ ಕ್ರಾಸ್ ಕಡೆ ಹೋಗುತ್ತಿದ್ದ ಬಸ್, ಎದುರುಗಡೆ ಬಂದ ಬೈಕ್ ಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾಗಿದೆ. ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.