ಗದಗ: ಯಶ್ ಹುಟ್ಟುಹಬ್ಬ ನಿಮಿತ್ತ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವಕರಿಗೆ ಸರ್ಕಾರ ಪರಿಹಾರ ಕೊಡಬೇಕೆಂದು ಸಿಎಂ ಹತ್ರ ಮಾತಾಡುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಯಶ್ ಅಭಿಮಾನಿಗಳ ದಾರುಣ ಸಾವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನಿನ್ನೆ ಮಧ್ಯರಾತ್ರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಯಶ್ ಅವರ ಅಭಿಮಾನಿಗಳು ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮಕ್ಕೆ, ಫ್ಲೆಕ್ಸ್ ನಿಲ್ಲಿಸಬೇಕು ಅಂತ ಎತ್ತರದ ಫ್ಲೆಕ್ಸ್ ಮಾಡಿಸಿ ಅದರಲ್ಲಿ ರಾಡ್ ಇಟ್ಟುಕೊಂಡು ಕಟ್ಟುತ್ತಿದ್ದರು. ರಾಡ್ ಉದ್ದ ಇದ್ದಿದ್ದರಿಂದ ಕೆ ಇ ಬಿ ಲೈನ್ ಗೆ ತಾಗಿ ಅಸು ನೀಗಿದ್ದಾರೆ.
ಮೂರು ಜನರಿಗೆ ತೀವ್ರವಾದ ಗಾಯಗಳಾಗಿದೆ. ಲಕ್ಷ್ಮೇಶ್ವರ್ ಆಸ್ಪತ್ರೆಗೆ ಒಬ್ಬರನ್ನು ದಾಖಲಿಸಲಾಗಿದೆ. ಇನ್ನು ಇಬ್ಬರನ್ನು ಸುಟ್ಟ ಗಾಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಎಸ್.ಪಿ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಅತ್ಯಂತ ದುರ್ದೈವಕರ ಘಟನೆ. ಉತ್ಸಾಹದಿಂದ ಕಾರ್ಯಕ್ರಮ ಚೆನ್ನಾಗಿ ಮಾಡಬೇಕು ಎಂಬ ಹುರುಪು ಅವರನ್ನು ಇವತ್ತು ನಮ್ಮಿಂದ ಕಸಿದುಕೊಂಡಿದೆ. ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅತ್ಯಂತ ಬಡ ಕುಟುಂಬ ಯುವಕರು. ಯುವಕರ ಕುಟುಂಬಕ್ಕೆ ಭಗವಂತ ದುಃಖ ಸಹಿಸುವ ಸ್ಥೈರ್ಯ ಕೊಡಲಿ. ಆಸ್ಪತ್ರೆಯಲ್ಲಿ ಇರುವವರು ಬೇಗ ಗುಣಮುಖರಾಗಬೇಕು.
ಮೃತಪಟ್ಟ ಯುವಕರಿಗೆ ಪರಿಹಾರ ಸರ್ಕಾರ ಕೊಡಬೇಕು. ಸಿಎಂ ಬಳಿ ಹೋಗ್ತಾ ಇದ್ದೇನೆ ಪರಿಹಾರ ಕೊಡುವ ಸಂಬಂಧ ಸಿಎಂ ಹತ್ರ ಮಾತಾಡುತ್ತೇನೆ. ಇನ್ನೊಂದು ಗಂಟೆಯಲ್ಲಿ ಸಿಎಂ ಹತ್ರ ತಿಳಿದುಕೊಂಡು ಮಾಹಿತಿ ನೋಡುತ್ತೇನೆ. ನೋವು ತರುವಂತ ಘಟನೆ ಆದಾಗ ಕೆಲವು ನಿಯಮ ತರಬೇಕು ಅಂತ ಹಲವರ ಸಲಹೆ ಇದೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ