ಬೆಂಗಳೂರು : ಹುಬ್ಬಳ್ಳಿಯಲ್ಲಿ ಕರ ಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧನ ಬೆನ್ನಲ್ಲೆ ‘ನನ್ನನ್ನೂ ಬಂಧಿಸಿ’ ಬಿಜೆಪಿ ನಾಯಕರ ಪೋಸ್ಟರ್ ಅಭಿಯಾನ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ನಾನು ಕರಸೇವಕ.. ನನ್ನನ್ನೂ ಬಂಧಿಸಿ’ ಎಂಬ ಪೋಸ್ಟರ್ ಹಿಡಿದು ಪೊಲೀಸ್ ಠಾಣೆ ಎದುರು ಮಾಜಿ ಸಚಿವ ಸಿ.ಟಿ.ರವಿ ಗುರುವಾರ ಪ್ರತಿಭಟನೆ ನಡೆಸಿದ್ದರು. ಇದರ ಫೋಟೋವನ್ನು ಎಡಿಟ್ ಮಾಡಿ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
‘ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ.. ನನ್ನನ್ನೂ ಬಂಧಿಸಿ’ ಎಂದು ಸಿ.ಟಿ.ರವಿಗೆ ಕಾಂಗ್ರೆಸ್ ಠಕ್ಕರ್ ಕೊಟ್ಟಿದೆ. ‘ಸಿಟಿ ರವಿ ಅವರೇ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ’ ಎಂದು ಮಾರ್ಮಿಕವಾಗಿ ನುಡಿದಿದೆ.
ಬಿಜೆಪಿ ಅಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ ಬಿಜೆಪಿಗರೆಲ್ಲರೂ “ನನ್ನನ್ನೂ ಬಂಧಿಸಿ“ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ ಎಂದು ಎಕ್ಸ್ನಲ್ಲಿ ಬರೆದುಕೊಳ್ಳುವ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.
ನಾನು 40% ಕಮಿಷನ್ ನುಂಗಿ ಸಂತೋಷ್ ಪಾಟೀಲ್ ಸಾವಿಗೆ ಕಾರಣನಾಗಿದ್ದೇನೆ. ನನ್ನನ್ನೂ ಬಂಧಿಸಿ ಎಂಬ ಪೋಸ್ಟರ್ ಹಿಡಿಸಿ ಮಾಜಿ ಸಚಿವ ಈಶ್ವರಪ್ಪಗೆ ತಿರುಗೇಟು ನೀಡಲಾಗಿದೆ. ಈಶ್ವರಪ್ಪ ಅವರು ಹಿಡಿಯಬೇಕಾದ ಪೋಸ್ಟರ್ ಇದು! ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ ಎಂದು ಎಕ್ಸ್ ಮೂಲಕ ತರಾಟೆಗೆ ತೆಗೆದುಕೊಂಡಿದೆ.
ನಾನು ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟು ಸಹಕರಿಸಿದ್ದೇನೆ. ನನ್ನನ್ನೂ ಬಂಧಿಸಿ ಎಂದು ಸಂಸದ ಪ್ರತಾಪ್ ಸಿಂಹ ಅವರ ಕೈಯಲ್ಲಿ ಪೋಸ್ಟರ್ ಹಿಡಿಸಿ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಪ್ರತಾಪ್ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ ಎಂದು ಕಿಡಿಕಾರಿದೆ.