ಬೆಂಗಳೂರು : ಬೆಂಗಳೂರಿನ ಮಟ್ಟಿಗೆ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಎನಿಸಿಕೊಳ್ಳುವ ಮಾಲ್ ಆಫ್ ಏಷ್ಯಾ ನಿರ್ಮಾಣಕ್ಕೆ ಕೈ ಹಾಕಿದ ಘಳಿಗೆನೇ ಸರಿ ಇಲ್ಲ ಎನ್ಸುತ್ತೆ. ಮಾಲ್ ಆರಂಭವಾದ ಮೊದಲ ದಿನದಿಂದ ಹಿಡಿದು ಈ ಕ್ಷಣದವರೆಗೂ ಒಂದಿಲ್ಲೊಂದು ವಿಘ್ನಗಳು ಎದುರಾಗ್ತಿವೆ. ಪಾರ್ಕಿಂಗ್ ಸಮಸ್ಯೆಯಿಂದ ಶುರುವಾದ ನಾಗರಿಕರ ಆಕ್ರೋಶ, ಕನ್ನಡಪರ ಸಂಘಟನೆಗಳ ಪ್ರತಿಭಟನೆವರೆಗೂ ನಡೆದುಬಂದು,ಸಧ್ಯ ಮ್ಯಾಟರ್ ಕೋರ್ಟ್ ನಲ್ಲಿದೆ.ಇದೆಲ್ಲದರ ನಡುವೆ ಮತ್ತೊಂದು ಸಂಕಷ್ಟ ಎನ್ನುವಂತೆ ಬಿಬಿಎಂಪಿ,ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ನಿಂದ ಮಾಲ್ ನ ಆಡಳಿತ ಮಂಡಳಿಗೆ ನೊಟೀಸ್ ಜಾರಿಯಾಗಿದೆ. ವಿವರಣೆ ನೀಡೊಕ್ಕೆ ಗಡುವನ್ನೂ ನೀಡಲಾಗಿದೆ.
ಮಾಲ್ ಆಫ್ ಏಷ್ಯಾದಿಂದ ಜನಸಾಮಾನ್ಯರಿಗೆ ಆಗ್ತಿರೋ ಕಿರಿಕಿರಿ ಜತೆಗೆ ಸಾಕಷ್ಟು ಉಲ್ಲಂಘನೆಗಳು ಮೇಲ್ನೋಟಕ್ಕೆ ಕಂಡುಬಂದಿವೆ. ಬಿಬಿಎಂಪಿ ನಗರಯೋಜನೆ ಅಧಿಕಾರಿಗಳೇಕೆ ಇದನ್ನೆಲ್ಲಾ ಗಮನಿಸಲಿಲ್ಲವೋ ಗೊತ್ತಿಲ್ಲ. ಏಕಂದ್ರೆ ಯಾವುದೇ ಉಲ್ಲಂಘನೆಗಳಿಲ್ಲದಿದ್ದರೆ ಮಾತ್ರ ಓಸಿ ಇಶ್ಯೂ ಮಾಡಬೇಕಿರುವುದು ನಿಯಮ. ಆದರೆ ಬಿಲ್ಡಿಂಗ್ ನಲ್ಲಿ ಸಾಕಷ್ಟು ಉಲ್ಲಂಘನೆಗಳಿದ್ದಾಗ್ಯೂ ಓಸಿ ಕೊಡಲಾಗಿದೆ. ಅದರಲ್ಲಿ ಕಣ್ಣಿಗೆ ರಾಚುವಂತೆ ಕಾಣೋದು ಪಾರ್ಕಿಂಗ್ ಗೆ ಮೀಸಲಿಟ್ಟ ಜಾಗದಲ್ಲಿ ಪಾರ್ಟಿ ಹಾಲ್ ನಿರ್ಮಾಣ. ಇದರಿಂದಲೇ ಪಾರ್ಕಿಂಗ್ ಸಮಸ್ಯೆ ಕಾಡ್ತಿದೆ. ಮಾಲ್ ಆಫ್ ಏಷ್ಯಾದ ವಿರುದ್ಧ ಜನಾಕ್ರೋಶ ಯಾವಾಗ ವ್ಯಕ್ತವಾಯ್ತೋ ಆಗ ಎಚ್ಚೆತ್ತುಕೊಂಡು ನೊಟೀಸ್ ನೀಡಿದೆ.
ಮಾಲ್ ಆಫ್ ಏಷ್ಯಾಗೆ ಸಂಕಷ್ಟ ಎದುರಾಗಿರುವುದು ಕೇವಲ ಬಿಬಿಎಂಪಿಯಿಂದ ಮಾತ್ರವಲ್ಲ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ನೊಟೀಸ್ ಬಿಸಿ ಮುಟ್ಟಿದೆ. ಮಾಲ್ ಆರಂಭವಾದಾಗಿನಿಂದ ಅಸಹನೀಯವಾದ ಶಬ್ದಮಾಲಿನ್ಯವಾಗ್ತಿದೆ. ವಾಸ ಮಾಡ್ಲಿಕ್ಕೆ ಆಗ್ತಿಲ್ಲ ಎಂದು ಪಕ್ಕದ ಎಲ್ ಎಂಡ್ ಟಿ ರೈನ್ ಟ್ರೀ ಬುಲೇವಾರ್ಡ್ ಅಪಾರ್ಟ್ಮೆಂಟ್ ನಿವಾಸಿಗಳು ಕಂಪ್ಲೆಂಟ್ ಮಾಡಿದ್ರು.
ಆ ಹಿನ್ನಲೆಯಲ್ಲಿ ಪರಿಸರಾಧಿಕಾರಿಗಳು ತಪಾಸಣೆ ಕೂಡ ಮಾಡಿದ್ರು. ಆ ರಿಪೋರ್ಟ್ ಈಗ ಬಂದಿದ್ದು ರಿಪೋರ್ಟ್ ನಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ಶಬ್ದಮಾಲಿನ್ಯವಾಗುತ್ತಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಶಬ್ದ ಮಾಲಿನ್ಯವನ್ನು 7 ದಿನಗಳೊಳಗೆ ಕಡಿಮೆ ಮಾಡಿಕೊಳ್ಳೊಕ್ಕೆ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ನಿಮಗೆ ನೀಡಿರುವ ನಿರಪೇಕ್ಷಣಾ ಪತ್ರವನ್ನು ರದ್ದು ಮಾಡ್ಬೇಕಾಗ್ತದೆ ಎಂದು ನೊಟೀಸ್ ನಲ್ಲಿ ಎಚ್ಚರಿಸಲಾಗಿದೆ.
ಇದೆಲ್ಲದರ ಜತೆಗೆ ಬೆಸ್ಕಾಂನಿಂದಲೂ ನೊಟೀಸ್ ನೀಡಲಾಗಿದೆ ಎನ್ನುವ ಮಾತುಗಳಿವೆ. ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ನಡೆದಿರಬಹುದಾದ ಉಲ್ಲಂಘನೆ ಸಂಬಂಧ ಈ ನೊಟೀಸ್ ನೀಡಿರಬಹುದು ಎನ್ನಲಾಗ್ತಿದೆ. ನೊಟೀಸ್ ಸಂಬಂಧ ನಿರ್ದಿಷ್ಟ ಗಡುವಿನೊಳಗೆ ಪ್ರತಿಕ್ರಿಯೆ ನೀಡಬೇಕು.ಇಲ್ಲವಾದಲ್ಲಿ ಇಲಾಖೆ ವತಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ ಎನ್ನಲಾಗ್ತಿದೆ.
ಆದರೆ ಇಲ್ಲಿ ಪ್ರಶ್ನೆಇರೋದು,ಈ ಎಲ್ಲಾ ಉಲ್ಲಂಘನೆಗಳು ವರ್ಷದಿಂದಲೂ ನಡೀತಿದೆ ಎನ್ನುವುದು ಸರ್ಕಾರದ ಇಲಾಖೆಗಳಿಗೆ ಮುಂಚೆನೇ ಗೊತ್ತಿರಲಿಲ್ವಾ ಎನ್ನೋದು. ಅದರಲ್ಲಿ ಮುಖ್ಯವಾಗಿ ಬಿಬಿಎಂಪಿನೇ ಈ ಎಲ್ಲಾ ಉಲ್ಲಂಘನೆಗೆ ನೈತಿಕ ಹೊಣೆ ಹೊರಬೇಕಾಗ್ತದೆ. ವ್ಯಾಪಕ ಉಲ್ಲಂಘನೆಗಳಿರುವಾಗ ನಗರಯೋಜನೆ ವಿಭಾಗದ ಅಧಿಕಾರಿಗಳು ಹೇಗೆ ಓಸಿಯನ್ನು ಇಶ್ಯೂ ಮಾಡಿದ್ರೋ ಗೊತ್ತಾಗ್ತಿಲ್ಲ. ತನಿಖೆ ಗಂಭೀರವಾಗಿ ನಡೆದಲ್ಲಿ ಮಾತ್ರ ಇದರಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆನ್ನುವುದು ಗೊತ್ತಾಗಬಹುದು.
ವರದಿ : ಮಂಜುನಾಥ್