ರಾಮನಗರ : ” ಸಂಕ್ರಾಂತಿ ವೇಳೆಗೆ ಸೂರ್ಯ ಪಥ ಬದಲಿಸುವ ರೀತಿ, ರಾಜಕೀಯ ಪಥ ಬದಲಾವಣೆ ಆಗುತ್ತೆ. ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಇರೋದು ಅನುಮಾನ ” ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಂಬರುವ ಸಂಕ್ರಾಂತಿಯ ನಂತರ ರಾಜ್ಯ ರಾಜಕಾರಣದಲ್ಲಿ ಏನಾದರೂ ಬದಲಾವಣೆ ಆಗುತ್ತೆ ಅಂತ ಹೇಳ್ತಿರೋದಕ್ಕೆ ಪ್ರಸ್ತುತ ನಡೆದಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಕಾಂಗ್ರೆಸ್ ನಾಯಕರ ನಡೆಯೇ ಕಾರಣವಾಗಿದೆ’’ಎಂದು ತಿಳಿಸಿದರು.
“2023 ಮುಗಿದ ಬಳಿಕ ರಾಜಕೀಯ ಬದಲಾವಣೆ ನಿರೀಕ್ಷೆ ಇದೆ. ಕಾಂಗ್ರೆಸ್ಸನ್ನು ಸಂಪರ್ಕ ಮಾಡಿರುವ ಅಸಮಾಧಾನಗೊಂಡ ಶಾಸಕರು ಈಗ ತಮ್ಮ ನಡೆಯ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡ್ತಿದ್ದಾರೆ. ಕೆಲ ಕಾಂಗ್ರೆಸ್ ಶಾಸಕರು ವೈಯಕ್ತಿಕವಾಗಿ ನನ್ನ ಜೊತೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಡಮ್ಮಿಗಳಾಗಿದ್ದು, ಅವರಿಗೆ ಶಾಸಕರ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ’’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ” ವಿವಿಧ ಪಕ್ಷಗಳ ಶಾಸಕರು ತಮ್ಮನ್ನು ಸಂಪರ್ಕಿಸಿದ್ದು, ಕಾಂಗ್ರೆಸ್ಸಿಗೆ ಹೋದರೆ ನಾವು ನಿರುಪಯುಕ್ತವಾದಂತೆ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ ” ಎಂದು ಯೋಗೇಶ್ವರ್ ಹೇಳಿದ್ದಾರೆ. ” ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ. ಹಾಗಾಗಿ, ಶಾಸಕರಿಗೆ ಅನುದಾನ ಕೊಡಲ್ಲ ಅಂತ ಹೇಳಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ. ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ರಾಜಕೀಯ ಭವಿಷ್ಯದ ಆತಂಕ ಇದೆ. ಹಾಗಾಗಿ ಇದರ ಪರಿಣಾಮವನ್ನು ಸಂಕ್ರಾಂತಿ ವೇಳೆಗೆ ಎಲ್ಲರೂ ನೋಡುತ್ತೀರ ” ಎಂದು ಅವರು ತಿಳಿಸಿದರು.