ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ನ ಊಟದಲ್ಲಿ ಜಿರಳೆ ಪತ್ತೆಯಾದ ಪ್ರಕರಣ ಸಂಬಂಧಿಸಿ ಮಾಧ್ಯಮಗಳಿಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್.ಟಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧ ಪೊಲೀಸ್ ಠಾಣೆಯ ಎಫ್ ಐ ಆರ್ ಸಂಬಂಧ ಡಿಸಿಪಿ ಶೇಖರ್ ಹೆಚ್.ಟಿ ಮಾಧ್ಯಮದೊಂದಿಗೆ ಮಾತನಾಡಿ, ನಿನ್ನೆ ವಿಧಾನಸೌಧ ಪೊಲೀಸ್ ಠಾಣೆಗೆ ವಕೀಲೆಯೋರ್ವರು ದೂರು ನೀಡಿದ್ದಾರೆ.ಖಾಸಗಿ ಹೋಟೆಲ್ ನಲ್ಲಿ ವಕೀಲೆ ಊಟಕ್ಕೆಂದು ತೆರಳಿದ್ದರು. ಮೂರು ಗಂಟೆ ಸಂದರ್ಭದಲ್ಲಿ ಊಟ ಮಾಡುವಾಗ ಜಿರಳೆ ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ, ಫುಡ್ ಇನ್ಸ್ ಪೆಕ್ಟರ್ ಗೆ ಕರೆ ಮಾಡಿದ್ದಾರೆ. ಇದಾದ ಬಳಿಕ ಊಟದ ತಯಾರಿ ಬಗ್ಗೆ ಅಡುಗೆ ಕೋಣೆಗೆ ಹೊಗಿ ಮೊಬೈಲ್ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಈ ವೇಳೆ ವಕೀಲೆಯನ್ನು ತಳ್ಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪ ಮಾಡಿದ್ದಾರೆ. ಈ ಹಿನ್ನಲೆ ಹೋಟೆಲ್‌ನ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ :
ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಿನ್ನೆ ಸಂಜೆ ಹೈಕೋರ್ಟ್ ವಕೀಲೆ ದಿ ಕ್ಯಾಪಿಟಲ್ ಹೋಟೆಲ್‌ಗೆ ಊಟಕ್ಕಾಗಿ ಹೋಗಿದ್ದರು. ಈ ವೇಳೆ ಪನ್ನೀರ್ ಗ್ರೇವಿಯನ್ನು ಆರ್ಡರ್ ಮಾಡಿದ್ದರು. ಆದರೆ ಇದನ್ನು ಸೇವಿಸುವಾಗ ಅವರಿಗೆ ಜಿರಳೆ ಕಂಡು ಬಂದಿದೆ. ಇದರಿಂದ ವಕೀಲೆ ಬೆಚ್ಚಿಬಿದ್ದಿದ್ದಾರೆ. ಹೈಕೋರ್ಟ್ ವಕೀಲೆ ಶೀಲಾ ಅವರಿಗೆ ಪ್ರತಿಷ್ಠಿತ ಹೋಟೆಲ್ ಊಟದಲ್ಲಿ ಜಿರಳೆ ಕಂಡುಬಂದಿದೆ. ಈ ವೇಳೆ ಕೋಪಗೊಂಡ ಅವರು ಹೋಟೆಲ್ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಆಗ ಸಿಬ್ಬಂದಿ ಉಡಾಫೆ ಮಾತನಾಡಿ ಬೇರೆ ಊಟ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಶೀಲಾ ಅವರು ನೇರ ಹೋಟೆಲ್ ಕಿಚನ್‌ಗೆ ತೆರಳಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹೋಟೆಲ್ ಕಿಚನ್‌ಗೆ ತೆರಳುತ್ತಿದ್ದಂತೆ ಶೀಲಾ ಅವರು ಮತ್ತೊಮ್ಮೆ ಶಾಕ್ ಆಗಿದ್ದಾರೆ. ಆ ಹೋಟೆಲ್ ಕಿಚನ್ ಅವಸ್ಥೆ ಕಂಡು ವಾಕರಿಕೆ ಉಂಟಾಗಿದೆ. ಕಿಚನ್ ಸಂಪೂರ್ಣ ಗಲೀಜು ತುಂಬಿಕೊಂಡಿತ್ತು. ಇದನ್ನು ಕಂಡು ರಸ್ತೆ ಬದಿ ಹೋಟೆಲ್‌ಗಳೇ ಲೇಸು ಎಂದು ಕಿರುಚಾಡಿದ್ದಾರೆ. ಜೊತೆಗೆ ಹೋಟೆಲ್ ಬಗ್ಗೆ ದೂರು ನೀಡಿದ್ದಾರೆ.