ಅಮಾನತುಗೊಂಡಿರುವ ಬಿಜೆಪಿ ಶಾಸಕ ಪ್ರಶಾಂತ್ ಜಗದೇವ್ ಜನರ ಗುಂಪಿನ ಮೇಲೆ ಕಾರು ಚಲಾಯಿಸಿದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಡಿಶಾದ ಖೋರ್ದಾ ಈ ಭೀಕರ ಘಟನೆ ನಡೆದಿದೆ. ಘಟನೆ ಬಳಿಕ ಉದ್ರಿಕ್ತರಾದ ಜನರ ಗುಂಪು ಪ್ರಶಾಂತ್ ಜಗದೇವ್ ಅವರ ಮೇಲೆ ಹಲ್ಲೆ ನಡೆಸಿದೆ.
ಘಟನೆಯಲ್ಲಿ ಏಳು ಪೊಲೀಸ್ ಸಿಬ್ಬಂದಿ, 15 ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಬಿಜೆಡಿ ಕಾರ್ಯಕರ್ತ ಸೇರಿದಂತೆ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. ಬ್ಲಾಕ್ ಅಧ್ಯಕ್ಷರ ಚುನಾವಣೆಗಾಗಿ ಬಾನಾಪುರ ಅಭಿವೃದ್ಧಿ ಕಚೇರಿ (ಬಿಡಿಒ) ಎದುರು ಬಿಜೆಪಿ ಬೆಂಬಲಿಗರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಜನರ ಗುಂಪು ಸೇರಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಜನರ ಗುಂಪಿನ ಮೇಲೆ ಅಡ್ಡಾದಿಡ್ಡಿ ಕಾರು ಹರಿದಾಗ ರೊಚ್ಚಿಗೆದ್ದ ಜನರು ಜಗದೇವ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಜಗದೇವ್ ಅವರಿಗೆ ಕೂಡ ಗಂಭೀರ ಗಾಯಗಳಾಗಿದ್ದು, ಬಾನ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.