ಪಾರ್ಕ್ ನನಲ್ಲಿ ಮಲಗುವ ವಿಷಯದಲ್ಲಿ ಉಂಟಾದ ಮನಸ್ತಾಪದಿಂದ ಚಿಂದಿ ಆಯುವ ವ್ಯಕ್ತಿಯನ್ನು 12 ಬಾರಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ವ್ಯಕ್ತಿಯನ್ನು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಬಾಬುಸಪಾಳ್ಯ ಬಿಡಿಎ ಪಾರ್ಕ್ ನಲ್ಲಿ ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ (43) ಹತ್ಯೆಯಾಗಿದ್ದು, ಮಾಲೂರು ಮೂಲದ ಸತೀಶ್ (30) ಬಂಧಿತ ಆರೋಪಿ.
ಅಶೋಕ್ ಮತ್ತು ಸತೀಶ್ ಇಬ್ಬರೂ ಚಿಂದಿ ಆಯುವವರಾಗಿದ್ದು, ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ ಮೊದಲಿನಿಂದಲೂ ಬಾಬುಸಪಾಳ್ಯದ ಪಾರ್ಕ್ ನಲ್ಲಿ ಮಲಗುತ್ತಿದ್ದ. ಲಾಕ್ ಡೌನ್ ಘೋಷಣೆ ಆದ ನಂತರ ಸತೀಶ್ ಈ ಪಾರ್ಕಿನಲ್ಲಿ ಬಂದು ಮಲಗುತ್ತಿದ್ದ. ಪಾರ್ಕ್ ನಲ್ಲಿ ಮಲಗುವ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು.
ಮೇ 15ರಂದು ಅಶೋಕ್ ತಲೆಗೆ ಮಚ್ಚಿನಿಂದ 12 ಬಾರಿ ಕೊಚ್ಚಿ ಸತೀಶ್ ಕೊಲೆ ಮಾಡಿದ್ದ. ಇಬ್ಬರು ಮೊಬೈಲ್ ಬಳಸದ ಕಾರಣ ಸಾಕ್ಷ್ಯಗಳಿಲ್ಲದೇ ಪ್ರಕರಣ ಪೊಲೀಸರಿಗೆ ತಲೆ ನೋವಾಗಿತ್ತು.
ಕೊಲೆಯಾದ ಜಾಗದಲ್ಲಿ ರಕ್ತಸಿಕ್ಕ ಚಪ್ಪಲಿ ಗುರುತು ಹಿಡಿದು ತನಿಖೆ ಆರಂಭಿಸಿದರು. ಇದೇ ಪಾರ್ಕ್ ಗೆ ಹಲವರು ರಾತ್ರಿ ವೇಳೆ ಮಲಗಲು ಬರುತ್ತಾರೆ ಎಂಬ ಮಾಹಿತಿ ಪಡೆದ ಪೊಲೀಸರು, ಸುಮಾರು 50 ಮಂದಿಯ ಹೆಜ್ಜೆ ಗುರುತು ಪರಿಶೀಲಿಸಿದರು. ನೀರಿನಲ್ಲಿ ಕಾಲನ್ನು ತೊಳಿಸಿ ಮರಳಿನ ಮೇಲೆ ಹೆಜ್ಜೆ ಇರಿಸಿದಾಗ ಸತೀಶ್ ಹೆಜ್ಜೆ ಗುರುತು ಹೊಂದಿಕೊಂಡಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದು ನಾನೇ ಎಂದು ಬಾಯಿ ಬಿಟ್ಟಿದ್ದಾನೆ.