ಮುಂಬರುವ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದೆ. ಒಂದು ವರ್ಷ ಮೊದಲೇ ಅಂದರೆ ಜನವರಿ 15ರಂದು 150ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ನಮ್ಮ ರಾಜ್ಯವನ್ನು ಲೂಟಿ ಮಾಡಿ ಬೇರೆ ರಾಜ್ಯಗಳಿಗೆ ಕೊಡುತ್ತಿವೆ. ಇದನ್ನು ತಡೆಯಲು ಪ್ರಾದೇಶಿಕ್ಷ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ 5 ವರ್ಷ ಆಡಳಿತ ನಡೆಸಲು ಅವಕಾಶ ನೀಡಬೇಕು ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಒಂದು ವಾರಗಳ ಕಾಲ ಪಕ್ಷದ ಜಿಲ್ಲಾವಾರು ಸಂಘಟನೆ ಸಭೆ ಕರೆದಿದ್ದೇನೆ. ಕೋವಿಡ್ ಅಬ್ಬರ ಇನ್ನೂ ಇದೆ ಹಾಗಾಗಿ ನಾನು ಜಿಲ್ಲೆಗಳಿಗೆ ಹೋಗಲು ಆಗುತ್ತಿಲ್ಲ. ಮುಂದಿನ ಐದು ದಿನಗಳ ಕಾಲ ಸಂಘಟನೆ ಬಗ್ಗೆ ಚರ್ಚೆ ಆಗುತ್ತೆ. ಆಷಾಡ ಮಾಸದ ನಂತರ ಜಿಲ್ಲಾವಾರು ಪ್ರವಾಸ ಮಾಡಲಿದ್ದೇನೆ ಎಂದು ಅವರು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ತಿಳಿಸಲಿದ್ದೇವೆ. ಕರ್ನಾಟಕ ರಾಜ್ಯ ಸಂಪದ್ಭರಿತ ರಾಜ್ಯ. ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಲೂಟಿ ಮಾಡುತ್ತಿವೆ ಎಂದು ಕುಮಾರಸ್ವಾಮಿ ನುಡಿದರು.
ಜಲಮಿಷನ್ ಗೆ ಸಂಬಂಧಿಸಿದ ಸಭೆಯನ್ನು ರಿವ್ಯೂ ಮಾಡಲು ಕೇಂದ್ರದ ಮಂತ್ರಿಗಳು ಬಂದಿದ್ದರು. ಜಲಮಿಷನ್ ನಮ್ಮ ರಾಜ್ಯದ ಯೋಜನೆ. ಇದಕ್ಕೆ ಸಚಿವರಾದ ಈಶ್ವರಪ್ಪ ಅವರೇ ಹೋಗ್ತಿಲ್ಲ. ಕೇಂದ್ರದ ಮಂತ್ರಿ ಬಂದಿದ್ದು ಮೇಕೆದಾಟು, ಕೃಷ್ಣ ಮೇಲ್ದಂಡೆ ಚರ್ಚೆ ಮಾಡಲು ಬಂದಿಲ್ಲ. ಇದನ್ನು ಗಮನಿಸಿದರೆ ಸರಕಾರದ ಆಡಳಿತ ವೈಖರಿ ಗಮನಿಸಬಹುದು ಎಂದು ಅವರು ಆರೋಪಿಸಿದರು.