ದೇಶದ ನಾನಾ ಕಡೆಗಳಿಗೆ ಟ್ರಕ್ ನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಎನ್ ಸಿಬಿ ಬೆಂಗಳೂರು ವಲಯ ಅಧಿಕಾರಿಗಳ ತಂಡ 15 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಎನ್ ಸಿಬಿ ಅಧಿಕಾರಿಗಳು ಹೈದರಾಬಾದ್ ನ ಪೆದ್ದ ಅಂಬರ್ ಪೇಟ್ ಟೋಲ್ ಪ್ಲಾಜಾ ಬಳಿ ಟ್ರಕ್ ಪತ್ತೆ ಹಚ್ಚಿದ್ದು, ಮಹಾರಾಷ್ಟ್ರದ ಮೂಲದ ಕೆ.ಕಾಳೇ, ಡಿ ದುರಾಲ್ಕರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಟ್ರಕ್ ನಲ್ಲಿ ಗಾಂಜಾ ತುಂಬಿದ 1080 ಪ್ಯಾಕೆಟ್ ಗಳನ್ನು ತುಂಬಲಾಗಿದ್ದು, ಒಂದು ಪ್ಯಾಕೆಟ್ ನಲ್ಲಿ 2 ಕೆಜಿಯಂತೆ ಒಟ್ಟಾರೆ 2 ಟನ್ ಕ್ಕಿಂತಲೂ ಹೆಚ್ಚು ಗಾಂಜಾ ಪತ್ತೆಯಾಗಿದೆ.
ಹೈದರಾಬಾದ್ ನಿಂದ ಪುಣೆ, ಮುಂಬೈ ಸೇರಿದಂತೆ ದೇಶದ ಹಲವು ಕಡೆ ಈ ಗ್ಯಾಂಗ್ ಗಾಂಜಾ ಪೂರೈಕೆ ಮಾಡುತ್ತಿತ್ತು. ಎನ್ ಸಿಬಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೇ ಇದೆ ದೊಡ್ಡಮಟ್ಟದ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಬರೋಬ್ಬರಿ 15 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.