ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ರಸ್ತೆಗಿಳಿಯಲು ಬಿಎಂಟಿಸಿ ಬಸ್ ಗಳು ಸಿದ್ಧಗೊಂಡಿದ್ದು, ಸರಕಾರದ ಅನುಮತಿ ದೊರೆಯುತ್ತಿದ್ದಂತೆ ಶೇ.50ರಷ್ಟು ಬಸ್ ಗಳು ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದಾರೆ.
ಲಾಕ್ ಡೌನ್ ನಿಂದ ಬಿಎಂಟಿಸಿಗೆ ಬರೊಬ್ಬರಿ 150 ಕೋಟಿ ನಷ್ಟವುಂಟಾಗಿದೆ. ಈಗಾಗಲೇ ಬಸ್ ಓಡಿಸುವ ಬಗ್ಗೆ ತುಂಬಾ ಬೇಡಿಕೆ ಇತ್ತು. ಆದರೆ ಸರ್ಕಾರದ ಅಧಿಕೃತ ಘೋಷಣೆಗೆ ನಾವು ಕಾಯುತ್ತಿದ್ದೇವೆ. ಬಿಎಂಟಿಸಿಗೆ ಪ್ರತಿನಿತ್ಯ 5 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ ಲಾಕ್ ಡೌನ್ ನಿಂದಾಗಿ 150 ಕೋಟಿ ರೂ. ನಷ್ಟ ಉಂಟಾಗಿದೆ ಎಂದರು.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅನುಮತಿ ದೊರೆಯುವ ಸಾಧ್ಯತೆ ಇದೆ. ಒಂದು ವೇಳೆ ಅನುಮತಿ ಸಿಕ್ಕರೆ ಸೋಮವಾರದಂದ ಮೊದಲ ಶಿಫ್ಟ್ ನಲ್ಲಿ 1000 ಬಸ್ ಗಳು, ಎರಡನೇ ಪಾಳಿಯಲ್ಲಿ 800 ರಿಂದ 1000 ಬಸ್ ಗಳು ರಸ್ತೆಗಿಳಿಯಲಿವೆ ಎಂದು ಅವರು ವಿವರಿಸಿದರು.
ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ. ಸಾರ್ವಜನಿಕರಿಗೆ ಬಸ್ ನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಬಸ್ ನಲ್ಲಿ ಪ್ರವೇಶ ಇರುತ್ತದೆ. ಗೂಗಲ್ ಪೇ, ಪೋನ್ ಪೇ ಮೂಲಕವೂ ಟಿಕೆಟ್ ಹಂಚಿಕೆ ವ್ಯವಸ್ಥೆ ಮಾಡಲಾಗಿದೆ. ಆರಂಭದಲ್ಲಿ 1800 ರಿಂದ 2000 ಬಸ್ ಗಳು ಸಂಚರಿಸಲಿದ್ದು, ಜನದಟ್ಟಣೆ ಗಮನಿಸಿ ಹೆಚ್ಚಿನ ಬಸ್ ಗೆ ಅವಕಾಶ ನೀಡಲಾಗುವುದು ಎಂದು ಶಿಖಾ ಹೇಳಿದರು.