2020ರ ಹಿಂದಿ ಪದವನ್ನು ಘೋಷಿಸಿದ ಆಕ್ಸ್ ಫರ್ಡ್: ಈ ಪದ ಭಾರತೀಯರ ಫೇವರೇಟ್!
ನವದೆಹಲಿ: 2020 ರ ಹಿಂದಿ ಪದವನ್ನು ಆಕ್ಸ ಫರ್ಡ್ ಲ್ಯಾಂಗ್ವೇಜಸ್ ಘೋಷಿಸಿದೆ. ಆಕ್ಸ್ ಫರ್ಡ್ ಲ್ಯಾಂಗ್ವೇಜಸ್ ನ ಭಾಷಾ ವಿದ್ವಾಂಸರು ಈ ಪದವನ್ನು 2020 ರ ಹಿಂದಿ ಪದ ಆಯ್ಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು 2020ರಲ್ಲಿ ಮಾಡಿದ ಬಹುತೇಕ ಭಾಷಣಗಳಲ್ಲಿ ಈ ಪದವೇ ಹೈಲೈಟ್. ಅಲ್ಲದೇ, ಕೊರೋನಾ ಸಂಕಷ್ಟದ ಸಮಯದಲ್ಲಿ ಈ ಪದವೇ ಭಾರತೀಯರ ಶಕ್ತಿಯಾಗಿತ್ತು.
ಲಾಕ್ಡೌನ್ ಮತ್ತು ಲಾಕ್ಡೌನ್ ನಂತರದ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾದ ಆತ್ಮನಿರ್ಭರತಾ ಎಂಬ ಹಿಂದಿ ಪದ ಈ ಗರಿಮೆಯನ್ನು ಪಡೆದಿದೆ. ಮೊದಮೊದಲು ಈ ಪದವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದರೂ ದಿನಕಳೆದಂತೆ ಎಲ್ಲ ಭಾರತೀಯರಿಗೂ ಈ ಪದ ಚಿರಪರಿಚಿತವಾಗತೊಡಗಿತು. ಕೃತಿಕಾ ಅಗರವಾಲ್, ಇಮೋಗನ್ ಮತ್ತು ಪೂನಂ ಅವರನ್ನೊಳಗೊಂಡ ಸಮಿತಿ ಈ ಪದವನ್ನು ಆಯ್ಕೆ ಮಾಡಿದೆ.
2020ರ ವರ್ಷದ ಪದವಾಗಿ ಹೊರಹೊಮ್ಮಲು ಸಾಕಷ್ಟು ಪದಗಳು ರೇಸ್ ನಲ್ಲಿದ್ದವು. ಇವೆಲ್ಲವನ್ನು ಹೊರತುಪಡಿಸಿ ಆತ್ಮನಿರ್ಭರತಾ 2020 ರ ಶಬ್ದವಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಈ ಪದ ಬಳಕೆಯಾದ ಬಳಿಕ ಎಲ್ಲೆಡೆ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗಿದೆ. ಅಲ್ಲದೇ ಕೊರೋನಾದಂಥ ಸಮಯದಲ್ಲಿ ಜನರಿಗೆ ವಿಶೇಷ ಪ್ಯಾಕೇಜ್ ಗಳನ್ನು ನೀಡುವ ಸಮಯದಲ್ಲಿ ಈ ಪದ ವ್ಯಾಪಕವಾಗಿ ಬಳಕೆಯಾಗಿರುವುದರಿಂದ ಆತ್ಮನಿರ್ಭರತಾವನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಹೇಳಿದೆ.