ಜುಲೈ 25ರಂದು ಹೈಕಮಾಂಡ್ ನಿಂದ ಸೂಚನೆ ಬರಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡುವ ಮೂಲಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಅಧಿಕಾರ ನೀಡಿಲ್ಲ. ಆದರೆ ನನ್ನ ಸಾಧನೆಯನ್ನು ಪರಿಗಣಿಸಿ 79 ವರ್ಷ ಆಗಿದ್ದರೂ 2 ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ ಎಂದರು.
ಜುಲೈ 25ರಂದು ಹೈಕಮಾಂಡ್ ನಿಂದ ಸೂಚನೆ ಬರಲಿದ್ದು, ಅದರಂತೆ ಪಕ್ಷವನ್ನು ಕಟ್ಟಿ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಕೆಲವೇ ದಿನಗಳಲ್ಲಿ ನಾನು ಸಿಎಂ ಆಗಿ 2 ವರ್ಷ ಪೂರೈಸಲಿದ್ದು, ಈ ಕಾರ್ಯಕ್ರಮ ಮುಗಿದ ನಂತರ ಪಕ್ಷದ ಚಟುವಟಿಕೆಗಳತ್ತ ಗಮನ ಹರಿಸುವುದಾಗಿ ಅವರು ಹೇಳಿದರು.
ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಠಾಧೀಶರು ನನಗೆ ಬೆಂಬಲ ನೀಡಿದ್ದಾರೆ. ಅವರಿಗೆ ನಾನು ಚಿರಋಣಿ. ಮುಂದಿನ ದಿನಗಳಲ್ಲಿ ನನ್ನ ಪರ ಅಥವಾ ಪಕ್ಷದ ವಿರುದ್ಧ ಯಾರೂ ಯಾವುದೇ ಹೇಳಿಕೆ ನೀಡುವುದು, ಚಳುವಳಿ ಮಾಡುವುದು ಮಾಡಬಾರದು ಎಂದು ಅಭಿಮಾನಿಗಳಲ್ಲಿ ಅವರು ವಿನಂತಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಹೈಕಮಾಂಡ್ ಏನು ಸೂಚನೆ ನೀಡುತ್ತೋ ಅದನ್ನು ಪಾಲಿಸುತ್ತೇನೆ ಎಂದು ಅವರು ಹೇಳಿದರು.