ಮಧ್ಯಮ ವೇಗಿಗಳಾದ ಮೊಹಮದ್ ಶಮಿ ಸಿಡಿಸಿದ ಅರ್ಧಶತಕ ಹಾಗೂ ಜಸ್ ಪ್ರೀತ್ ಬುಮ್ರಾ ಅವರ ಅಮೋಘ ಜೊತೆಯಾಟದ ನೆರವಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಡ್ರಾದತ್ತ ಸಾಗಿದೆ.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 5ನೇ ಹಾಗೂ ಅಂತಿಮ ದಿನವಾದ ಸೋಮವಾರ 6 ವಿಕೆಟ್ ಗೆ 181 ರನ್ ಗಳಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಭೋಜನ ವಿರಾಮದ ವೇಳೆಗೆ 8 ವಿಕೆಟ್ ಕಳೆದುಕೊಂಡು 286 ರನ್ ಗಳಿಸಿದ್ದು, ಒಟ್ಟಾರೆ 259 ರನ್ ಗಳ ಮಹತ್ವದ ಮುನ್ನಡೆ ಗಳಿಸಿದೆ.
ದಿನದಾಟದ ಆರಂಭದಲ್ಲೇ ರಿಷಭ್ ಪಂತ್ (22) ಮತ್ತು ಇಶಾಂತ್ ಶರ್ಮ (16) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಭಾರತ ತಂಡಕ್ಕೆ ಮೊಹಮದ್ ಶಮಿ ಮತ್ತು ಜಸ್ ಪ್ರೀತ್ ಬುಮ್ರಾ ಮುರಿಯದ 8ನೇ ವಿಕೆಟ್ ಗೆ 88 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು.
ಮೊಹಮದ್ ಶಮಿ 67 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 52 ರನ್ ಸಿಡಿಸಿದರೆ, ಬುಮ್ರಾ 59 ಎಸೆತಗಳಲ್ಲಿ 2 ಬೌಂಡರಿ ಒಳಗೊಂಡ 30 ರನ್ ಬಾರಿಸಿ ಇಬ್ಬರೂ ವಿಕೆಟ್ ರಕ್ಷಿಸಿಕೊಂಡಿದ್ದು, ಇದೀಗ ಸೋಲಿನಿಂದ ಬಹುತೇಕ ಪಾರಾದಂತಾಗಿದೆ.