ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಬಸವರಾಜ ಬೊಮ್ಮಾಯಿ ಕೊರೊನಾ, ಪ್ರವಾಹ ನಿಯಂತ್ರಣಕ್ಕೆ ಆದ್ಯತೆ ಜೊತೆಗೆ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.
ಬೆಂಗಳೂರಿನಲ್ಲಿ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು 1000ದಿಂದ 1200ರೂ.ಗೆ ಏರಿಕೆ ಮಾಡಲಾಗಿದ್ದು, ಇದಕ್ಕಾಗಿ 862ಕೋಟಿ ರೂ. ಹೆಚ್ಚುವರಿಯಾಗಿ ಮೀಸಲಿಡಲಾಗುವುದು ಎಂದರು.
ವಿಧವಾ ವೇತನವನ್ನು 600ರಿಂದ 800 ರೂ.ಗೆ ಏರಿಕೆ ಮಾಡಲಾಗುವುದು.ಇದರಿಂದ 414 ಕೋಟಿ ರೂ. ಹೆಚ್ಚು ಮೀಸಲಿಡಬೇಕಾಗುತ್ತದೆ. ವಿಶೇಷ ಚೇತನ ಮಕ್ಕಳ ಶಿಷ್ಯ ವೇತನನ್ನು 600ರಿಂದ 800 ರೂ.ಗೆ ಏರಿಸಲಾಗುವುದು. ಇದರಿಂದ 3.66 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಅಲ್ಲದೇ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ಶಿಷ್ಯ ವೇತನ ಸೇರಿದಂತೆ ಉನ್ನತ ಶಿಕ್ಷಣಕ್ಕಾಗಿ ಹೆಚ್ಚುವರಿಯಾಗಿ 1000 ಕೋಟಿ ರೂ. ಮೀಸಲಿಡಲಾಗುವುದು ಎಂದು ಅವರು ಹೇಳಿದರು.
ನಾಳೆಯಿಂದಲೇ ಪ್ರವಾಹ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ರಾಜ್ಯದ ಇತಿಹಾಸದಲ್ಲೇ ಛಾಪು ಮೂಡಿಸುವಂತಹ ಉತ್ತಮ ಆಡಳಿತ ನೀಡುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಪ್ರಧಾನಿಗಳ ಸಮಯ ನಿಗದಿಯಾದ ಕೂಡಲೇ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವುದಾಗಿ ಅವರು ಸ್ಪಷ್ಟಪಡಿಸಿದರು.