ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯ ಜತೆಗೆ, ಬ್ಲ್ಯಾಕ್ ಫಂಗಸ್ ನಿವಾರಣೆಗೂ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ 40 ಕೋಟಿ ರೂ.ಗಳಷ್ಟು ಬ್ಲ್ಯಾಕ್ ಫಂಗಸ್ ಔಷಧಿ ಖರೀದಿ ಮಾಡಲಾಗುತ್ತಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದರು.
ಕಪ್ಪು ಶಿಲೀಂದ್ರ ಕಾಯಿಲೆ ಬಗ್ಗೆ ಸರಕಾರ ಅತಿ ಹೆಚ್ಚು ಕಾಳಜಿ ವಹಿಸಿದ್ದು, ಮೂರು ದಿನಗಳ ಹಿಂದೆ 40 ಕೋಟಿ ರೂ.ಗಳಷ್ಟು ಮೊತ್ತದ ಔಷಧಿ ಖರೀದಿಗೆ ರಾಜ್ಯ ಸರಕಾರ ಆದೇಶ ನೀಡಿದ್ದು, ಆ ಔಷಧಿಗಳ ಪೂರೈಕೆ ಶುಕ್ರವಾರದಿಂದಲೇ ಆರಂಭವಾಗಿದೆ. ಇದರಲ್ಲಿ ʼಲೈಪೋಸೊಮಲ್ ಆಂಪೋಟೆರಿಸಿನ್-ಬಿʼ ಎನ್ನುವ ಔಷಧ ಕೊರತೆ ಇದೆ. ಇದನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸುವುದಾಗಿ ಕೇಂದ್ರ ಸಚಿವ ಸದಾನಂದ ಗೌಡರು ಭರವಸೆ ನೀಡಿದ್ದಾರೆ ಎಂದರು.
ಹಾಗೆಯೇ ಇದಕ್ಕೆ ಪರ್ಯಾಯವಾಗಿ ʼಎಮಲ್ಷನ್ ಆಂಪೋಟೆರಿಸನ್-ಬಿʼ ಔಷಧಿಯನ್ನು ಒಂದು ಲಕ್ಷ ವಯಲ್ಸ್‌ಗಳನ್ನು 30 ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ಆದೇಶ ನೀಡಲಾಗಿದೆ. ಅದರ ಜತೆಯಲ್ಲೇ ʼಅಂಪೋಟೆರಿಸಿನ್ ಪ್ಲೇನ್ʼ ಎನ್ನುವ ಔಷಧಿಯನ್ನೂ ಖರೀದಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಇನ್ನು, ರಾಜ್ಯದಲ್ಲಿ ಈವರೆಗೆ ವರದಿಯಾಗಿರುವ ಪ್ರಕರಣಗಳು 800 ಹಾಗೂ ಸಸ್ಪೆಕ್ಟ್ ಆಗಿರುವಂಥವು 700 ಮಾತ್ರ. ಆದರೂ ಸರಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಔಷಧಿ ಖರೀದಿ ಮಾಡುತ್ತಿದೆ. ಹೀಗಾಗಿ ಆತಂಕಪಡುವ ಅಗತ್ಯ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
4 ತಾಲೂಕು ಆಸ್ಪತ್ರೆಗಳಲ್ಲಿ ಶೀಘ್ರವೇ 100 ಹಾಸಿಗೆಗಳ ವ್ಯವಸ್ಥೆ :
ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಈಗಾಗಲೇ 100 ಬೆಡ್‌ಗಳ ವ್ಯವಸ್ಥೆ ಇದೆ. ಇನ್ನು ನೆಲಮಂಗಲದಲ್ಲಿ 30, ದೇವನಹಳ್ಳಿಯಲ್ಲಿ 30-40, ಹೊಸಕೋಟೆಯಲ್ಲಿ 30-40 ಬೆಡ್‌ಗಳ ವ್ಯವಸ್ಥೆ ಇದೆ. ಈ ಎಲ್ಲ ತಾಲೂಕುಗಳಲ್ಲಿ ಕನಿಷ್ಟ 100 ಹಾಸಿಗೆಗಳ ಅತ್ಯುತ್ತಮ ವ್ಯವಸ್ಥೆ ಮಾಡಲಾಗುವುದು. ಆಕ್ಸಿಜನ್, ಐಸಿಯು ಬೆಡ್‌ಗಳ ಜತೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ಆಕ್ಸಿಜನ್ ಜನರೇಟರ್‌ಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.