ಮೂಲಭೂತ ಸೌಕರ್ಯ ಕಲ್ಪಿಸುವ ಹಲವಾರು ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣ ಕೇಂದ್ರ ಸರಕಾರಕ್ಕೆ ಹೆಚ್ಚುವರಿಯಾಗಿ 4.45 ಲಕ್ಷ ಕೋಟಿ ರೂ. ಹೊರೆ ಬಿದ್ದಿದೆ.
ಕೇಂದ್ರ ಸರಕಾರದ ಅಂಕಿ-ಅಂಶಗಳ ಸಚಿವಾಲಯ ಈ ಮಾಹಿತಿ ನೀಡಿದ್ದು, ಸರಕಾರ 1671 ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣ ಯೋಜನೆಗೆ ಮೀಸಲಿಟ್ಟಿದ್ದ 22,54,75.77 ಕೋಟಿ ರೂ. ಮೊತ್ತ ಈಗ 26,99,651.62 ಕೋಟಿ ರೂ.ಗೆ ಏರಿಕೆಯಾಗಿದೆ. ಇದರಿಂದ ಕೇಂದ್ರ ಸರಕಾರದ ಮೇಲೆ ಹಚ್ಚುವರಿ 4,45,475.85 ಕೋಟಿ ರೂ. ಹೊರೆ ಬಿದ್ದಿದೆ.
ಕೇಂದ್ರ ಸರಕಾರ ಕೈಗೆತ್ತಿಕೊಂಡಿರುವ ಮೂಲಭೂತ ಸೌಕರ್ಯ ಒದಗಿಸುವ ಬಹುತೇಕ ಯೋಜನೆಗಳ ಅಂದಾಜು ಮೊತ್ತ 150 ಕೋಟಿ ರೂ.ಆಗಿದೆ. ಈ ರೀತಿಯ 1671 ಯೋಜನೆಗಳ ಪೈಕಿ 443 ಯೋಜನೆಗಳು ನಿಗದಿತ ಮೊತ್ತಕ್ಕಿಂತ ಹೆಚ್ಚು ದುಬಾರಿ ಆಗಿದ್ದರೆ 514 ಯೋಜನೆಗಳು ವಿಳಂಬವಾಗಿವೆ. ಇದರಿಂದ ಸರಕಾರಕ್ಕೆ ಯೋಜನೆಗಳಿಗೆ ಮೀಸಲಿಟ್ಟ ಮೊತ್ತಕ್ಕಿಂತ ಶೇ.19.76ರಷ್ಟು ಏರಿಕೆಯಾಗಿದೆ.
ಸುಮಾರು 881 ಯೋಜನೆಗಳು ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಇವು ಯಾವಾಗ ಮುಗಿಯುತ್ತದೆ ಎಂಬುದು ತಿಳಿದಿಲ್ಲ. 514 ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಇದರಲ್ಲಿ 89 ಯೋಜನೆಗಳು ನಿಗದಿತ ಅವಧಿಗಿಂತ 1ರಿಂದ 12 ತಿಂಗಳು ತಡವಾಗಬಹುದು. 113 ಯೋಜನೆಗಳು 13ರಿಂದ 24 ತಿಂಗಳು ಹಾಗೂ 204 ಯೋಜನೆಗಳು 25ರಿಂದ 60 ತಿಂಗಳು ತಡವಾಗಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.