ಸಮಾಜವಾದಿ ಪಕ್ಷದ ಮಹಿಳಾ ಅಭ್ಯರ್ಥಿಯೊಬ್ಬರ ಸೀರೆ ಎಳೆದು ಅಸಭ್ಯವಾಗಿ ಪ್ರತಿಸ್ಪರ್ಧಿಗಳು ವರ್ತಿಸಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಸರಕಾರ 6 ಪೊಲೀಸರನ್ನು ಅಮಾನತುಗೊಳಿಸಿದೆ.
ಲಕ್ಷ್ಮೀಪುರ ಖೇರಿ ಜಿಲ್ಲೆಯ ಸ್ಥಳೀಯ ಪಂಚಾಯಿತಿ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಪ್ರತಿಪಕ್ಷದ ಪುರುಷ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬಂದ ಸಮಾಜವಾದಿ ಪಕ್ಷದ ಮಹಿಳಾ ಅಭ್ಯರ್ಥಿಯ ಸೀರೆ ಎಳೆದು ಅಸಭ್ಯವಾಗಿ ವರ್ತಿಸಿದ್ದರು. ಅಲ್ಲದೇ ನಾಮಪತ್ರ ಕಸಿದು ಹರಿದು ಹಾಕಿದ್ದರು. ಈ ವೀಡಿಯೋ ಸಂಚಲನ ಸೃಷ್ಟಿಸಿತ್ತು.
ಪ್ರಕರಣದ ವೇಳೆ ಕರ್ತವ್ಯ ಲೋಪ ತೋರಿದ್ದಕ್ಕಾಗಿ ಒಬ್ಬ ಸರ್ಕಲ್ ಇನ್ ಸ್ಪೆಕ್ಟರ್, ಇಬ್ಬರು ಇನ್ ಸ್ಪೆಕ್ಟರ್ ಮತ್ತು ಮೂವರು ಕಾನ್ ಸ್ಟೇಬಲ್ ಗಳನ್ನು ವಜಾ ಮಾಡಲಾಗಿದೆ. ಸಮಾಜವಾದಿ ಪಕ್ಷ ಇದು ಬಿಜೆಪಿ ಅಭ್ಯರ್ಥಿಗಳ ಗೂಂಡಾಗಿರಿ ಎಂದು ಗಂಭೀರ ಆರೋಪ ಮಾಡಿತ್ತು.
ಕಾಂಗ್ರೆಸ್ ನಾಯಕ ಪ್ರಿಯಾಂಕ ಗಾಂಧಿ ಕೂಡ ಈ ವೀಡಿಯೋ ಪೋಸ್ಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.