ಅಂಗನವಾಡಿ ಕಾರ್ಯಕರ್ತೆಯ 6 ವರ್ಷದ ಪುತ್ರಿ ಡೆಂಘ್ಯೂಗೆ ಬಲಿಯಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ವರದಿಯಾಗಿದೆ.
ಸಿಂಧನೂರು ನಗರದ ಮಹಿಬೂಬಿಯಾ ಕಾಲೋನಿಯ ನಿವಾಸಿ ಅಂಗನವಾಡಿ ಕಾರ್ಯಕರ್ತೆ ಅನಿತಾ ಅವರ ಪುತ್ರಿ ಸೋನು (6) ಮೃತ ಬಾಲಕಿ
ಒಂದು ವಾರದಿಂದ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸೋನುಳನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಮೃತಪಟ್ಟಿದ್ದಾಳೆ.
ಕಳೆದ ವಾರವಷ್ಟೇ ಮಾನ್ವಿಯಲ್ಲಿ 5 ವರ್ಷದ ಬಾಲಕ ಡೆಂಗ್ಯೂಗೆ ಬಲಿಯಾಗಿದ್ದ. ಡೆಂಗ್ಯೂಗೆ ಜಿಲ್ಲೆಯಲ್ಲಿ ಇದುವರೆಗೂ 5 ಮಕ್ಕಳು ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಇಡೀ ಜಿಲ್ಲೆಯಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಡೆಂಗ್ಯೂ ಪ್ರಕರಗಳೂ ವಿಪರೀತವಾಗಿವೆ. ರೀಮ್ಸ್ ಆಸ್ಪತ್ರೆಯೊಂದರಲ್ಲೇ 30ಕ್ಕೂ ಅಧಿಕ ಮಕ್ಕಳಲ್ಲಿ ಡೆಂಗ್ಯೂ ಪತ್ತೆಯಾಗಿವೆ. ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1500ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ.