ಚಾಮರಾಜನಗರ : ಕೇವಲ ಐದೇ ದಿನಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರೂ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದು, ನಾಲ್ಕು ವರ್ಷದ ಮಗುವೊಂದು ಅನಾಥವಾಗಿರುವ ಕರುಣಾಜನಕ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡದಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಗುರು ಎಂಬವರಿಗೆ 10 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆರೋಗ್ಯ ತೀವ್ರ ಹದಗೆಟ್ಟು ಮೇ 5ರಂದು ಸಾವನ್ನಪ್ಪಿದ. ಇವರ ಪತ್ನಿ ರಶ್ಮಿಗೂ ಸೋಂಕು ದೃಢಪಟ್ಟು ಮೇ 9ರಂದು ಮೃತಪಟ್ಟಿದ್ದರು.
ಇನ್ನು ಮೃತ ಗುರು ಅವರಿಗೆ ತಂದೆ-ತಾಯಿ, ಒಡಹುಟ್ಟಿದವರೂ ಯಾರೂ ಇಲ್ಲ. ರಶ್ಮಿ ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ವೈರಸ್ ತಗುಲಿದ ವಿಚಾರ ತಿಳಿದು ಕೊತ್ತಲವಾಡಿ ಗ್ರಾಮಕ್ಕೆ ಬಂದು ಆರೈಕೆ ಮಾಡಿದ್ದ ರಶ್ಮಿ ಅವರ ತಂದೆ-ತಾಯಿಗೂ ಈಗ ಕೋವಿಡ್ ದೃಢಪಟ್ಟಿದೆ.
ಇದೀಗ ರಶ್ಮಿ ಅವರ ತಂಗಿ ಮನೆಯಲ್ಲಿ ಮಗುವನ್ನು ಇರಿಸಿಕೊಳ್ಳಲಾಗಿದೆ. ಈ ದುರಂತ ಕಂಡು ಇಡೀ ಗ್ರಾಮವೇ ಕಣ್ಣೀರಿಟ್ಟಿದೆ