ಬೆಂಗಳೂರು : ಬಿಪಿಎಲ್ ಕುಟುಂಬದಲ್ಲಿ ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ ತಲಾ ಐದು ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿ ಎಂದು ಸರ್ಕಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಿಪಿಎಲ್ ಕುಟುಂಬದವಿಗೆ 10 ಕೆ.ಜಿ. ಅಕ್ಕಿ, 10 ಸಾವಿರ ರೂಪಾಯಿ ಕೊಡಿ ಎಂದರೆ ಕೇಳಲಿಲ್ಲ. ಸರ್ಕಾರ ಇರುವುದು ಬಡವರಿಗೆ ಸ್ಪಂದಿಸಲು. ರಾಜ್ಯ ಸರ್ಕಾರದ ಬಜೆಟ್ 2.42 ಲಕ್ಷ ಕೋಟಿಯಲ್ಲಿ 15-20 ಸಾವಿರ ಕೋಟಿಯನ್ನ ಬಡವರಿಗೆ ನೀಡಿದ್ದರೆ ಏನು ನಷ್ಟವಾಗುತ್ತಿರಲಿಲ್ಲ. ಪ್ಯಾಕೇಜ್ ನಲ್ಲಿ ಕೆಲವರಿಗೆ ಪುಡಿಕಾಸು ಕೊಡುವುದಾಗಿ ಹೇಳಿದ್ದಾರೆ, ಆದು ಯಾರಿಗೆ ಸಿಗುತ್ತೆ, ಸಿಗಲ್ವೋ ಗೊತ್ತಿಲ್ಲ. ಹಿಂದೆ ಪ್ರಕಟಿಸಿದ ಪ್ಯಾಕೇಜ್ ಯಾರಿಗೂ ಸಿಕ್ಕಿಲ್ಲ ಎಂದರು.
ಕೊರೊನಾ ದಿಂದ ಮೃತಪಟ್ಟ ಬಿಪಿಎಸ್ ಕಾರ್ಡ್ ನವರಿಗೆ ಒಂದು ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಅದು ಸಾಲುವುದಿಲ್ಲ, ಕನಿಷ್ಠ ಐದು ಲಕ್ಷ ಕೊಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಕೊಡುವುದು ಅವೈಜ್ಞಾನಿಕ. ಆಸ್ಪತ್ರೆಯವರು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಬಿಲ್ ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕೋವಿಡ್ ನಿಂದ 32 ಸಾವಿರ ಜನ ಸತ್ತಿದ್ದಾರೆ. ಅದರಲ್ಲಿ ಬಿಪಿಎಲ್ ಕಾರ್ಡ್ ನವರು 25 ಸಾವಿರ ಮಂದಿ ಇರಬಹುದು, ಎಲ್ಲರಿಗೂ ಕೊಡಲು ಒಂದುವರೆ ಸಾವಿರ ಕೋಟಿಯಾಗಬಹುದು. ಅಷ್ಟು ಮಂದಿಗೂ ಪರಿಹಾರ ನೀಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾ ಕಾಲದಲ್ಲಿ ಜನರಿಗೆ ಏನೇನು ನೆರವು ನೀಡಲಿಲ್ಲ ಎಂದು ಟೀಕಿಸಿದರು.