ಕಸ್ತೂರಿ ನಿವಾಸಕ್ಕೆ 50ರ ಸಂಭ್ರಮ: ನಿರ್ದೇಶಕ ಭಗವಾನ್ರಿಗೆ ಸನ್ಮಾನ

ಬೆಂಗಳೂರು: ಕಸ್ತೂರಿ ನಿವಾಸ ಸಿನಿಮಾಗೆ ಇಂದು 50ವರ್ಷದ ಸಂಭ್ರಮ.. ಜನವರಿ 29, 1971ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲೆಯನ್ನ ಬರೆದಿದೆ. ಐವತ್ತು ವರ್ಷಗಳು ಕಳೆದರೂ ಸಹ ಇಂದಿಗೂ ಕೂಡಾ ಅಭಿಮಾನಿಗಳಲ್ಲಿ ಅದೇ ಕ್ರೇಜ್ ಉಳಿಸಿಕೊಂಡು ಬಂದಿದೆ.
ಡಾ.ರಾಜ್ ಕುಮಾರ್, ಜಯಂತಿ, ಆರತಿ ಸೇರಿದಂತೆ ತಾರಾಗಣ ಈ ಸಿನಿಮಾದಲ್ಲಿದ್ದು, ಈ ಸಿನಿಮಾಗೆ ದೊರೈ-ಭಗವಾನ್ ನಿರ್ದೇಶನ ಮಾಡಿದ್ದರು. ಕೆಸಿಎನ್ ಗೌಡ್ರು ನಿರ್ಮಾಣದ ಈ ಸಿನಿಮಾ ಇತ್ತೀಚಿಗೆ ನವೀನ ತಂತ್ರಜ್ಞಾನದಲ್ಲಿ ಬಿಡುಗಡೆಯಾಗಿತ್ತು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇಂದು ಡಾ.ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳ ಬಳಗದಿಂದ 50ನೇ ವರ್ಷದ ಸಂಭ್ರಮವನ್ನ ಡಾ.ರಾಜ್ ಕುಮಾರ್ ಪುಣ್ಯಭೂಮಿ ಕಂಠೀರವ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಎಸ್.ಕೆ.ಭಗವಾನ್, ನಿರ್ಮಾಪಕ ಕೆಸಿಎನ್ ಮೋಹನ್ ಹಾಗೂ ರಾಜ್ ಕುಟುಂಬದ ಗೋವಿಂದರಾಜು ಅಭಿಮಾನಿಗಳು ಭಾಗವಹಿಸಿದರು. ಈ ವೇಳೆ ಅಭಿಮಾನಿಗಳ ಬಳಗದಿಂದ ಗಣ್ಯರಿಗೆ ಸನ್ಮಾನ ಮಾಡಲಾಯಿತು.