ರಾಷ್ಟ್ರಪ್ರಶಸ್ತಿ ವಿಜೇತ ನಟ ಹಾಗೂ ಮತ್ತೊಬ್ಬರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದ ಸಂಚಾರಿ ವಿಜಯ್ ದಾರುಣ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ದಾನ ಮಾಡಿದ ಅವರ ಅಂಗಾಂಗಳ ಮೂಲಕ ಮೂವರ ಬಾಳಿನಲ್ಲಿ ಬೆಳಕು ಮೂಡಿದೆ.
ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡ ನಂತರ ಸೋಮವಾರ ರಾತ್ರಿ ಅವರ ಅಂಗಾಂಗಳನ್ನು ಹೊರತೆಗೆಯಲಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ ನಂತರ ತುಮಕೂರು ಬಳಿಯ ಅವರ ಸ್ವ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.
ಸಂಚಾರಿ ವಿಜಯ್ ಅವರ ಒಂದು ಕಿಡ್ನಿಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ 34 ವರ್ಷದ ಬೆಂಗಳೂರಿನ ಲಗ್ಗೆರೆ ನಿವಾಸಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಕಿಡ್ನಿ ಅಳವಡಿಸಲಾಯಿತು.
ಬ್ಲಡ್ ಗ್ರೂಪ್, ಡಿಎನ್ಎ, ಕಿಡ್ನಿ ಅಳತೆ ಎಲ್ಲವೂ ಮಹಿಳೆಗೆ ಮ್ಯಾಚ್ ಆಗಿದ್ದರಿಂದ ಸಂಚಾರಿ ವಿಜಯ್ ಅವರ ಒಂದು ಕಿಡ್ನಿಯನ್ನು ಮಂಗಳವಾರ ಬೆಳಿಗ್ಗೆ ಯಶಸ್ವಿಯಾಗಿ ಅಳವಡಿಸಲಾಯಿತು.
ಇದೇ ವೇಳೆ ಸಂಚಾರಿ ವಿಜಯ್ ಅವರ ಎರಡು ಕಣ್ಣುಗಳನ್ನು ಇಬ್ಬರಿಗೆ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಜೋಡಿಸಲಾಯಿತು. ದೃಷ್ಟಿ ಇಲ್ಲದ ಇಬ್ಬರಿಗೆ ತಲಾ ಒಂದು ಕಣ್ಣು ಅಳವಡಿಕೆ ಮಾಡುವ ಮೂಲಕ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.