ನೀಲಿ ಚಿತ್ರ ನಿರ್ಮಿಸಿ ಮೊಬೈಲ್ ಆ್ಯಪ್ ಗಳಲ್ಲಿ ವಿತರಣೆ ಮಾಡುತ್ತಿದ್ದ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ನೀಲಿ ಚಿತ್ರಗಳ ನಿರ್ಮಾಣ ಜಾಲದ ಹಿಂದೆ ಪ್ರಮುಖ ವ್ಯಕ್ತಿ ಎಂದಬ ಕಾರಣಕ್ಕೆ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷ್ಯಧಾರಗಳು ಲಭಿಸಿದ್ದು, ತನಿಖೆ ಮುಂದುವರಿಯಲಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ನೀಲಿ ಚಿತ್ರಗಳನ್ನು ನಿರ್ಮಿಸಿ ಕೆಲವು ನಿರ್ದಿಷ್ಟ ಮೊಬೈಲ್ ಆ್ಯಪ್ ಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಈ ಮೊಬೈಲ್ ಆ್ಯಪ್ ಗಳನ್ನು ಮುಂಬೈನ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಕಳೆದ ಫೆಬ್ರವರಿಯಲ್ಲಿ ಪತ್ತೆ ಹಚ್ಚಿ ಈ ಜಾಲದ ಹಿಂದೆ ಬಿದ್ದಿದ್ದರು.
ಫೆಬ್ರವರಿಯಲ್ಲಿ ನೀಲಿ ಚಿತ್ರಗಳ ನಿರ್ಮಾಣ ಹಾಗೂ ಪ್ರಸಾರ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ ಕುಂದ್ರಾ ಇದರ ಹಿಂದಿರುವ ವ್ಯಕ್ತಿ ಎಂಬುದಕ್ಕೆ ನಮಗೆ ಬಲವಾದ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.