ಕೋಲಾರ: ಕಳೆದ ಬಾರಿಯ ಸೀಸನ್ನ ಬಿಗ್ ಬಾಸ್ (ಸೀಸನ್ 7) ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಅವರ ಮದುವೆ ಒಂದೇ ದಿನಕ್ಕೆ ಹಾದಿರಂಪ ಬೀದಿರಂಪ ಆಗಿದೆ. ಕೋಲಾರ ಮೂಲದ ಚೈತ್ರಾ ಕೋಟೂರು ಅವರು ಮಂಡ್ಯ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ್ ಅವರನ್ನು ನಿನ್ನೆ ಭಾನುವಾರ ಮದುವೆಯಾಗಿದ್ದರು.
ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇಗುಲದಲ್ಲಿ ಇಬ್ಬರ ವಿವಾಹ ಜರುಗಿತ್ತು. ತನಗೆ ಇಷ್ಟವಿಲ್ಲದಿದ್ದರೂ ಚೈತ್ರಾ ಕೋಟೂರು ಜೊತೆ ಮದುವೆ ಮಾಡಲಾಗಿದೆ ಎಂದು ನಾಗಾರ್ಜುನ್ ಆರೋಪಿಸಿದ್ದಾರೆ. ನಾಗಾರ್ಜುನ್ ಹಾಗೂ ಅವರ ಪೋಷಕರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ.
ಸಂಘಟನೆಗಳನ್ನ ಬಳಸಿಕೊಂಡು ತನ್ನನ್ನು ಬಲವಂತವಾಗಿ ಕೂಡಿಹಾಕಿ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗಿದೆ. ತನಗೆ ಮದುವೆ ಒಂಚೂರು ಇಷ್ಟವಿರಲಿಲ್ಲ. ಬೆದರಿಕೆಗೆ ಬಗ್ಗೆ ಚೈತ್ರಾಗೆ ತಾಳಿ ಕಟ್ಟಿದೆ ಎಂದು ನಾಗಾರ್ಜುನ್ ಹೇಳಿದ್ದಾರೆ.
ನಾಗಾರ್ಜುನ್ ಕುಟುಂಬದವರು ಕೋಲಾರದ ಕುರುಬರ ಪೇಟೆಯಲ್ಲಿರುವ ಚೈತ್ರಾಳ ಮನೆಗೆ ನಿನ್ನೆ ಬಂದು ಗಲಾಟೆ ಮಾಡಿದ್ದಾರೆ. ನಂತರ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ಕೂಡ ಕೊಟ್ಟಿದ್ದಾರೆ. ಅದಾದ ಬಳಿಕ ನಾಗಾರ್ಜುನ್ ಅವರ ಪೋಷಕರು ಮಂಡ್ಯಕ್ಕೆ ವಾಪಸ್ಸಾಗಿದ್ದಾರೆ