ಬೆಂಗಳೂರು: ಏಷಿಯಾದ ಅತಿ ದೊಡ್ಡ ಹೈಬ್ರಿಡ್ ಏರ್ ಶೋ ಗೆ ನಿನ್ನೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ಯಲಹಂಕ ವಾಯುನೆಲೆಯಲ್ಲಿ ನಿನ್ನೆಯಿಂದ ಲೋಹದ ಹಕ್ಕಿಗಳದ್ದೇ ಕಲರವ. ದೇಶ ವಿದೇಶಗಳಿಂದ ಬಂದ 60ಕ್ಕೂ ಅಧಿಕ ವಿಮಾನಗಳು ಪ್ರದರ್ಶನದಲ್ಲಿ ಭಾಗಿಯಾಗಿವೆ. ಇಂದು ಸಂಸದ ತೇಜಸ್ವಿ ಸೂರ್ಯ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಮಧ್ಯಾಹ್ನ 12 ರ ಸುಮಾರಿಗೆ ತೇಜಸ್ವಿ ಸೂರ್ಯ ಹಾರಾಟ ನಡೆಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇಂದೂ ಕೂಡ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು, ಕೇವಲ ಬಿಸಿನೆಸ್ ವಿಸಿಟರ್ಸ್ ಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಹೆಚ್ ಎ ಎಲ್ ನಿಂದ ಇಂದು ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ ನಡೆಯಲಿದೆ. ಈ ಸಾಲಿನ ವಹಿವಾಟಿನ ಬಗ್ಗೆ ಹೆಚ್ ಎ ಎಲ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಪ್ರತಿ ಆವೃತ್ತಿಯ ಏರ್ ಶೋ ಐದು ದಿನ ನಡೆಯುತ್ತದೆ. ಆದರೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿಯ ಏರ್ ಶೋ ವನ್ನು ಕೇವಲ 3 ದಿನಗಳು ನಡೆಸಲಾಗುತ್ತಿದೆ. ಅಲ್ಲದೇ, ಕೊರೋನಾ ಸೋಂಕು ಹರಡುವ ಭೀತಿಯಿಂದ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಏರ್ ಶೋ ವೇದಿಕೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಹಲವು ಒಪ್ಪಂದಗಳು ನಡೆಯಲಿವೆ.
ನಿನ್ನೆ ನಡೆದ ಪ್ರದರ್ಶನದಲ್ಲಿ ಭಾರತದಲ್ಲಿಯೇ ನಿರ್ಮಾಣವಾದ ಐದು ವಿಮಾನಗಳು ಪಾಲ್ಗೊಂಡಿದ್ದವು. ಸುಖೋಯ್, ರಫೇಲ್, ಜಾಗ್ವಾರ್ ನ ಗರುಡ ವಿಮಾನಗಳ ಪ್ರದರ್ಶನ ಕಣ್ಮನ ಸೆಳೆದವು. ಇನ್ನು ಇದೇ ಮೊದಲ ಬಾರಿ ಸೂರ್ಯಕಿರಣ್ ಮತ್ತು ಸಾರಂಗ್ ಒಟ್ಟಿಗೆ ಪ್ರದರ್ಶನ ನೀಡಿದ್ದು ವಿಶೇಷವೆನಿಸಿತ್ತು.
.