ಬೀಜಿಂಗ್: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಐದು ತಿಂಗಳು ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಚೀನಾ ಸರ್ಕಾರವನ್ನು ಟೀಕೆ ಮಾಡಿದ್ದ ಜಾಕ್ ಮಾ ಕಳೆದ ಕೆಲ ತಿಂಗಳುಗಳಿಂದ ಕಣ್ಮರೆಯಾಗಿದ್ದರು. ದಕ್ಷಿಣ ಚೀನಾ ಸಮುದ್ರದ ದ್ವೀಪವೊಂದರ ಐಷಾರಾಮಿ ರೆಸಾರ್ಟ್ ನಲ್ಲಿ ಜಾಕ್ ಮಾ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಜಾಕ್ ಮಾ ನಾಪತ್ತೆ ವಿಚಾರ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. ಚೀನಾ ಸರ್ಕಾರವನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಜಾಕ್ ಮಾ ರನ್ನು ಸರ್ಕಾರವೇ ಭೂಗತ ಸ್ಥಳದಲ್ಲಿರಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿದ್ದವು.
ಜಾಕ್ ಮಾ ಜ.20 ರಂದು ಗ್ರಾಮೀಣ ಪ್ರದೇಶದ ಶಿಕ್ಷಕರು ಮಾಡಿದ ಸಾಧನೆಗಳನ್ನು ಗುರುತಿಸುವ ಕಾರ್ಯಕ್ರಮವೊಂದರಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಭಾಷಣ ಮಾಡಿದ್ದರು. ಆದರೆ, ಈ ವರೆಗೆ ಅವರು ಎಲ್ಲಿದ್ದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಕಳೆದ ನವೆಂಬರ್ ನಲ್ಲಿ ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಜಾಕ್ ಮಾ ಭಾಗವಹಿಸಬೇಕಿತ್ತು. ಆದರೆ, ಅದೇ ಸಮಯದಲ್ಲಿ ಅಲಿಬಾಬಾ ಸಂಸ್ಥಾಪಕ ಧಿಡೀರ್ ಕಣ್ಮರೆಯಾಗಿದ್ದರು. ಬಳಿಕ ಕಾರ್ಯಕ್ರಮದ ತೀರ್ಪುಗಾರರ ಪಟ್ಟಿಯಿಂದ ಅವರನ್ನು ಹೊರಗಿಡಲಾಗಿತ್ತು. ಕೆಲಸದ ಒತ್ತಡ ಹೆಚ್ಚಿರುವುದರಿಂದ ಜಾಕ್ ಮಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅಲಿಬಾಬಾ ಕಂಪನಿ ಹೇಳಿತ್ತು.
ವ್ಯಾಪಾರ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ ಚೀನಾ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು. ಹೀಗಾಗಿ ಜಾಕ್ ಮಾ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಜಾಕ್ ಮಾ ಕಂಪನಿಗಳ ತನಿಖೆಗೆ ಸರ್ಕಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ಜಾಕ್ ಮಾ ಕಣ್ಮರೆಯಾಗಿದ್ದು ಭಾರೀ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು.