ಗೆದ್ದಲು ಹುಳುಗಳ ಹೊಟ್ಟೆ ಸೇರಿದ ಲಕ್ಷಾಂತರ ರೂಪಾಯಿ: ಆಘಾತದಲ್ಲಿ ಕುಟುಂಬ
ಹೈದರಾಬಾದ್: ಜೀವಮಾನವಿಡೀ ದುಡಿದು ಕೊಡಿಟ್ಟಿದ್ದ ಲಕ್ಷಾಂತರ ರೂ. ಹಣ ಗೆದ್ದಲು ಹುಳುಗಳ ಹೊಟ್ಟೆ ಸೇರಿದೆ. ಕೂಡಿಟ್ಟ ಹಣ ಮನೆಯಲ್ಲಿಯೇ ಇರಲಿ ಎಂದು ಹಣವನ್ನು ಕಬ್ಬಿಣದ ಪೆಟ್ಟಿಗೆಯೊಂದರಲ್ಲಿ ಇಟ್ಟಿದ್ದ ಅವರು ಇಂದು ಆಘಾತಕ್ಕೊಳಗಾಗಿದ್ದಾರೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮೈಲಾವರಂ ನಿವಾಸಿ ಜಾಮಲಯ್ಯ ಎಂಬುವವರು ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳಲು 5 ಲಕ್ಷ ರೂ.ಗಳನ್ನು ಉಳಿತಾಯ ಮಾಡಿ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿದ್ದರು. ಈ ಕಬ್ಬಿಣದ ಪೆಟ್ಟಿಗೆ ಸುರಕ್ಷಿತವಾಗಿಲ್ಲದ ಕಾರಣ ಇದರಲ್ಲಿದ್ದ ನೋಟುಗಳು ಗೆದ್ದಲು ಹುಳುವಿಗೆ ಆಹಾರವಾಗಿವೆ.
ಹಂದಿ ಮಾರಾಟದ ವ್ಯಾಪಾರವನ್ನು ನಡೆಸುತ್ತಿದ್ದ ಜಾಮಲಯ್ಯ ದಿನಂಪ್ರತಿ ವಹಿವಾಟಿನ ಹಣವನ್ನು ಬ್ಯಾಂಕ್ನಲ್ಲಿಡದೇ ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆಯಲ್ಲಿಡುತ್ತಿದ್ದರು. ಒಮ್ಮೆಲೇ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅವರಿಗೆ ಆಘಾತ ಕಾದಿತ್ತು. ನೋಟುಗಳು ಹಾಳಾಗಿರುವುದನ್ನು ನೋಡಿದ ಜಾಮಲಯ್ಯ ಊರಿನಲ್ಲಿರುವ ಚಿಕ್ಕ ಮಕ್ಕಳಿಗೆ ಹರಿದ ನೋಟುಗಳನ್ನು ಆಟವಾಡಲು ನೀಡಿದ್ದರು. ಮಕ್ಕಳ ಕೈಯಲ್ಲಿ ಹರಿದ ನೋಟುಗಳನ್ನು ಗಮನಿಸಿದ ಊರ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನಾಧರಿಸಿ ಪರಿಶೀಲಿಸಿದ ಪೊಲೀಸರಿಗೆ ಗೆದ್ದಲುಗಳು ನೋಟು ತಿಂದ ಸುದ್ದಿ ತಿಳಿದಿದೆ.
ಸದ್ಯ ಜಾಮಲಯ್ಯ ಮತ್ತವರ ಕುಟುಂಬ ದೊಡ್ಡ ಮೊತ್ತದ ಹಣ ಕಳೆದುಕೊಂಡು ಆಘಾತಕ್ಕೊಳಗಾಗಿದ್ದಾರೆ. ಲಕ್ಷಾಂತರ ರೂ. ಹಣ ಕಳೆದುಕೊಂಡ ನಮಗೆ ಸಹಾಯ ಮಾಡಿ ಎಂದು ಬೇಡುತ್ತಿದ್ದಾರೆ. ಸದ್ಯ ಗೆದ್ದಲು ತಿಂದುಹಾಕಿದ ನೋಟುಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.