ಕಳೆದ ದಿನ ಇಡೀ ಸುರಿದ ಮಳೆಯಿಂದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೋಣೆ ಕುಸಿದು ಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಪೋಚಾಪುರ ಗ್ರಾಮದಲ್ಲಿ ನಡೆದಿದೆ.
ಸತತ ಮಳೆ ಬಿದ್ದ ಪರಿಣಾಮ ಮೇಲ್ಚಾವಣಿಯಲ್ಲಿ ನೀರು ನಿಂತು ಬಿಸಿಯೂಟ ಕೋಣೆಯ ಮೇಲ್ಛಾವಣೆ ಸಂಪೂರ್ಣ ಬಿದ್ದಿದೆ. ಬಿಸಿಯೂಟ ತಯಾರಿಸುವ ಎಲ್ಲ ಪಾತ್ರೆಗಳು ಹಾನಿಗೀಡಾಗಿವೆ. ಇನ್ನು ಕೆಲ ಕೋಣೆಗಳು ಶಿಥಿಲಾವಸ್ಥೆಯಲ್ಲಿ ಇದ್ದು, ಮಳೆಯಿಂದ ಬೀಳುವ ಅಪಾಯ ಇದೆ. ಕಳೆದ ವರ್ಷವೂ ಮಳೆಗೆ ಕಂಪೌಂಡ್ ಗೋಡೆ ಕುಸಿದಿದ್ದು, ಈವರೆಗೂ ದುರಸ್ತಿ ಆಗಿಲ್ಲ. ಈಗ ಬಿಸಿಯೂಟದ ಕೋಣೆಯೂ ಕುಸಿದು ಬಿದ್ದಿದೆ. ಕೋಣೆ ನಿರ್ಮಾಣ ಮಾಡಿ ಐದು ವರ್ಷವೂ ಆಗಿಲ್ಲ.
ಸಣ್ಣ ಮಳೆಗೆ ಜಖಂಗೊಂಡು ಕುಸಿದು ಹಾಳಾಗಿದೆ. ಕೊರೊನಾ ಹಿನ್ನಲೆ ಶಾಲಾ ಪ್ರಾರಂಭವಾಗದೆ ಇರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಶಾಲೆ ಪ್ರಾರಂಭಕ್ಕೂ ಮುಂಚೆ ದುರಸ್ತೆ ಮಾಡುವುದಕ್ಕೆ ಅಧಿಕಾರಿಗಳು ಗಮನ ಹರಿಸಬೇಕು,ಸರಕಾರಿ ಶಾಲೆ ಅಂದರೆ ಹೆಚ್ಚು ನಿರ್ವಹಣೆ ಹಾಗೂ ಕಾಳಜಿ ಇಲ್ಲ ಕಾರಣ ಮಳೆ ಆದರೆ ಸಾಕು ಕಳಪೆ ಕಟ್ಟಡ ಕುಸಿಯುತ್ತಿದೆ ಎಂದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಇಲಾಖೆಯವರು ಬಿದ್ದಿರುವ ಕೋಣೆ ಮರುನಿರ್ಮಾಣ ಮಾಡುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.