ಪತ್ನಿಯೊಂದಿಗೆ ಮನಸ್ತಾಪ: ಆತ್ಮಹತ್ಯೆಗೆ ಶರಣಾದ ಬಾರ್ಕ್ ವಿಜ್ಞಾನಿ

ಮುಂಬೈ: ಮಕ್ಕಳಿಗೆ ಆಹಾರ ನೀಡುವ ಕುರಿತು ಪತ್ನಿಯೊಂದಿಗೆ ಮನಸ್ತಾಪ ಉಂಟಾದ ಕಾರಣ ಭಾಭಾ ಪರಮಾಣು ಸಂಶೋಧನಾ ಕೇಂದ್ರದ (ಬಾರ್ಕ್) ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 37 ವರ್ಷದ ಅನುಜ್ ತ್ರಿಪಾಠಿ ಅಣುಶಕ್ತಿನಗರದಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ನಿನ್ನೆ ಬೆಳಗ್ಗೆ ತಮ್ಮ ಮಕ್ಕಳಿಗೆ ಉಪಹಾರ ತಿನ್ನಿಸುವ ವಿಷಯದಲ್ಲಿ ಪತ್ನಿಯೊಂದಿಗೆ ಜಗಳ ಆರಂಭವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ತೀವ್ರ ಮಟ್ಟಕ್ಕೆ ಹೋದ ವಾಗ್ವಾದದಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಿದೆ. ಇದರಿಂದ ಬೇಸತ್ತ ಅನುಜ್ ತಮ್ಮ ಬೆಡ್ ರೂಂ ಗೆ ತೆರಳಿ ಅಲ್ಲಿದ್ದ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ. ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.